ವಿಟ್ಲ, ಅ.03 (DaijiworldNews/TA): ಕಸಬಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಮಳೆ ಹಾಗೂ ಗಾಳಿಯ ಪರಿಣಾಮವಾಗಿ ಮೂರು ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿರುವ ಘಟನೆಗಳು ಶನಿವಾರ ವರದಿಯಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.





ವಿಟ್ಲ ಕಸಬಿನ ಅಪ್ಪೇರಿ ಪಾದೆ ನಿವಾಸಿ ಜಯಂತಿ ಕೋಂ. ವಿಜಯ ಭಂಡಾರಿ ಅವರ ಮನೆಯ ಮೇಲೆ ಮರ ಬಿದ್ದು ಮನೆಯ ಭಾಗಶಃ ಹಾನಿಯಾಗಿದೆ. ಪುಣಚ ಗ್ರಾಮದ ಅಜೇರು ಎಂಬಲ್ಲಿ ಪ್ರಭಾಕರ ಪ್ರಭು ಬಿನ್ ಶಂಕರನಾರಾಯಣ ಪ್ರಭು ಅವರ ಮನೆಯ ಮೇಲೆಯೂ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇದೇ ವೇಳೆ ವಿಟ್ಲ ಮುಡ್ನೂರು ಗ್ರಾಮದ ಕೇಪುಳಗುಡ್ಡೆ ಎಂಬಲ್ಲಿ ಸುಂದರಿ ಕೋಂ. ಕುಂಞಿ ನಲಿಕೆ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮರ ಬಿದ್ದು ಮನೆಗಳಿಗೆ ಹಾನಿಯಾದ ಘಟನೆಗಳ ಕುರಿತು ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಾನಿಯ ಪ್ರಮಾಣದ ಕುರಿತು ಪರಿಶೀಲನೆ ನಡೆಯಬೇಕಿದೆ.