ಕಡಬ, ಅ.03 (DaijiworldNews/TA): ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಕಡವೆ ಏಕಾಏಕಿ ಅಡ್ಡ ಬಂದಿದ್ದು, ಡಿಕ್ಕಿಯ ಪರಿಣಾಮ ಕಾರಿನ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ. ಡಿಕ್ಕಿಯ ಬಳಿಕ ಕಡವೆ ರಸ್ತೆಯ ಬದಿಗೆ ಎಸೆಯಲ್ಪಟ್ಟು ಮೃತಪಟ್ಟಿರುವುದು ಕಂಡುಬಂದಿದೆ. ಘಟನೆಯಿಂದಾಗಿ ವಾಹನ ಸವಾರರಲ್ಲಿ ಆತಂಕ ಮೂಡಿದ್ದು, ಈ ಭಾಗದಲ್ಲಿ ಕಾಡುಪ್ರಾಣಿಗಳ ಸಂಚಾರ ಇರುವುದರಿಂದ ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.