ಸುಳ್ಯ, ಅ.03 (DaijiworldNews/TA): ಕಳೆದ ಹಲವು ತಿಂಗಳುಗಳಿಂದ ಕಾಡಾನೆ ದಾಳಿಯಿಂದ ತತ್ತರಿಸುತ್ತಿರುವ ಸುಳ್ಯ ತಾಲೂಕಿನ ಜಾಲ್ಸೂರು ಸಮೀಪದ ಮಾಡೂರು ಗ್ರಾಮದಲ್ಲಿ ಪೆರ್ನಾಜೆ ಪರಿಸರದ ಹಲವೆಡೆ ಮತ್ತೆ ಒಂಟಿ ಸಲಗವು ಲಗ್ಗೆಯಿಟ್ಟು, ಹಲವು ಕೃಷಿಕರ ತೋಟಕ್ಕೆ ಹಾನಿ ಮಾಡಿದೆ.

ಮಾಹಿತಿ ಪಡೆದ ಅರಣ್ಯ ಇಲಾಖೆಯು ಶುಕ್ರವಾರ ಬೆಳಗ್ಗಿನಿಂದಲೇ ಶೋಧಕಾರ್ಯ ಆರಂಭಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಪ್ರಮುಖವಾಗಿ ಮಾಡ್ಯೂರು ಗ್ರಾಮದ ಮಳಿ, ಕೊಚ್ಚಿ, ಪೂವಂದೂರು, ಚಾಕೋಟೆ, ಮದ್ಧ, ಆಚಾರಿಮೂಲೆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಯು, ಅ.1ರಂದು ರಾತ್ರಿ ಹೆದ್ದಾರಿಯ ಎಡಭಾಗದ ಹಲವು ಭಾಗಗಳಿಗೆ ಲಗ್ಗೆಯಿಟ್ಟು ಹಾನಿ ಮಾಡಿದ ಘಟನೆ ನಡೆದಿದೆ. ರಾತ್ರಿ ಗಂಟೆ 11ರ ಸುಮಾರಿಗೆ ಚಾಕೋಟೆ ಭಾಗದಲ್ಲಿದ್ದ ಒಂಟಿ ಸಲಗವು ಬಳಿಕ ಅಲ್ಲಿಂದ ತಿರುಗಿ ನನ್ಯ, ಬಜಕುಡೇಲು, ಬದಿನಾರು, ನಿಧಿಮುಂಡ, ಪಿಲಿಪಂಜರ, ಪಾದೆ, ಭಾಗದ ಹಲವು ತೋಟಗಳಲ್ಲಿ ಕೃಷಿಗೆ ಹಾನಿ ಮಾಡಿದೆ.
ನನ್ಯ ನಿವಾಸಿ ಡಾ ಸೂರ್ಯನಾರಾಯಣ ಭಟ್ ಅವರ ಮನೆಯ ಮುಂಭಾಗದಲ್ಲಿ ರಾತ್ರಿ ಗಂಟೆ 1.30ರ ಸುಮಾರಿಗೆ ಕಾಡಾನೆ ಸಂಚರಿಸಿ ಮನೆಯ ಕಂಪೌಂಡ್ನ ಕಬ್ಬಣದ ಗೇಟನ್ನು ಮೆಟ್ಟಿ ಜಖಂಗೊಳಿಸಿದೆ, ಅದೇ ಸಮಯಕ್ಕೆ ಎಚ್ಚರಗೊಂಡ ಡಾ. ಸೂರ್ಯನಾರಾಯಣ ಭಟ್ರವರು ಕಾಡಾನೆಯು ಮನೆಯ ಗೇಟನ್ನು ಹಾನಿ ಮಾಡಿದ್ದು, ತಡರಾತ್ರಿಯೇ ಪಕ್ಕದ ನಿವಾಸಿಗಳಿಗೆ ಹಾಗೂ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಿದ್ದಾರೆ.