ಮಂಗಳೂರು, ಅ.03 (DaijiworldNews/AA): ಬರ್ಕೆ ಮತ್ತು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಯಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಲಾಗಿದ್ದು, ಬಂಧಿತರಿಂದ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಸೇರಿದಂತೆ ಕಳವು ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಈಶಾನ್ಯ ದೆಹಲಿಯ ಗೋಕುಲ್ ಪುರಿ ನಿವಾಸಿ ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ(34) ಹಾಗೂ ದೆಹಲಿಯ ಸುಲ್ತಾನ್ ಪುರಿ ನಿವಾಸಿ ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34)
ಬಂಧಿತ ಆರೋಪಿಗಳು.
ಮಂಗಳೂರು ನಗರದ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್ನಲ್ಲಿನ ಮನೆಯವರು ಸೆ. 28 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಮನೆಯ ಬಾಗಿಲಿಗೆ ಲಾಕ್ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಅವರು ಸಂಜೆ ಸುಮಾರು 5:10 ಗಂಟೆಗೆ ಮನೆಗೆ ಹಿಂದಿರುಗಿ ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿ ಮುರಿದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯಲ್ಲಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ನಗದು ಹಣ, ವಾಚ್ ಹಾಗೂ ಒಂದು ಟ್ರಾಲಿ ಬ್ಯಾಗ್ ಸೇರಿದಂತೆ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026, ಕಲಂ 331(3), 305 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಅದೇ ರೀತಿ ಸೆ. 27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ಸರಹದ್ದಿ ಬೊಕ್ಕಪಾಟ್ನ ರಸ್ತೆಯ ಮನೆಯೊಂದರಲ್ಲಿ ಲಾಕರ್ ಹೊಡೆದು ಕಳವು ಮಾಡಲು ಯಾವುದೇ ಬೆಲೆಬಾಳುವ ಸೊತ್ತು ದೊರೆಯದೇ, ಚೆಕ್ ಪುಸ್ತಕಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆ ಅ.ಕ್ರ 86/2026 ಕಲಂ 331(3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆಯನ್ನು ಕೈಗೊಂಡು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡದ ಮೂಲಕ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪತ್ತೆಯಾಗಿದ್ದು, ತಕ್ಷಣ ಗುಜರಾತ್ ರಾಜ್ಯದ ವಡೋದರಾ ಪೊಲೀಸರ ಸಹಾಯ ಪಡೆಯಲಾಯಿತು.
ಪೊಲೀಸರ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಸೆ. 29 ರಂದು ವಡೋದರದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಕಳವು ಮಾಡಲಾಗಿದ್ದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಮುಂದಿನ ತನಿಖೆಯ ಸಲುವಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುವುದು.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ಎಂಬಾತನ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ಮತ್ತು ಇತನ ವಿರುದ್ದ ವಾರಂಟು ಹಾಗೂ ಪ್ರೊಕ್ಲಮೇಶನ್ ಬಾಕಿ ಇದ್ದು, ಸಂಬಂಧಪಟ್ಟ ಠಾಣೆಗಳಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿಯನ್ನು ನೀಡಲಾಗಿದೆ.