ಮಂಗಳೂರು/ಉಡುಪಿ, ಅ.03 (DaijiworldNews/AA): ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಮತ್ತು ಉಳ್ಳಾಲ ತಾಲೂಕುಗಳು ಹಾಗೂ ಉಡುಪಿ ಜಿಲ್ಲೆಯ ಉಡುಪಿ ಮತ್ತು ಬೈಂದೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ.

ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಈ ತಾಲೂಕುಗಳಲ್ಲಿ ದಾಖಲಾದ ಮಳೆ ಪ್ರಮಾಣ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ವರದಿಯ ಆಧಾರದ ಮೇಲೆ, ಗುರುವಾರ ಸರ್ಕಾರವು ಈ ತಾಲೂಕುಗಳನ್ನು ಹೆಚ್ಚುವರಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಈ ಘೋಷಣೆಯ ನಂತರ, ಕುಡಿಯುವ ನೀರಿನ ಅಭಾವ ಎದುರಿಸಬಹುದಾದ ಪ್ರದೇಶಗಳನ್ನು ಗುರುತಿಸಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳು ಒಣಗಿದರೆ ಅಥವಾ ಅಂತರ್ಜಲ ಮಟ್ಟ ಕುಸಿದರೆ, ತುರ್ತು ಕುಡಿಯುವ ನೀರು ಪೂರೈಕೆಗೆ ಲಭ್ಯವಿರುವ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ. ಬರ ನಿರ್ವಹಣೆಗೆ ಸರ್ಕಾರ ಬಿಡುಗಡೆ ಮಾಡುವ ವಿಶೇಷ ಅನುದಾನದ ಜೊತೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರ ಪಿಡಿ ಖಾತೆಗಳಲ್ಲಿ ಲಭ್ಯವಿರುವ ಹಣವನ್ನೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.
ಕುಡಿಯುವ ನೀರು ಪೂರೈಕೆ, ನೀರಿನ ಮೂಲಗಳ ನಿರ್ವಹಣೆ ಮತ್ತು ತುರ್ತು ಕಾಮಗಾರಿಗಳು ಸೇರಿದಂತೆ ಬರ ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ವಿವಿಧ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದಾಗಿದೆ.
ಈ ವರ್ಷ ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು ಹಾಗೂ ಕಳಸ ಸೇರಿದಂತೆ ಒಟ್ಟು 22 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. "ಈ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದರಿಂದ ಹೆಚ್ಚುವರಿ ಬೆಳೆ ಪರಿಹಾರ, ಕುಡಿಯುವ ನೀರು ನಿರ್ವಹಣೆ ಹಾಗೂ ಇತರ ಸೌಲಭ್ಯಗಳು ಲಭ್ಯವಾಗಲಿವೆ" ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ತಿಳಿಸಿದ್ದಾರೆ.
ಮತ್ತೊಂದೆಡೆ, ಶುಕ್ರವಾರ ಉಡುಪಿ ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ತಾಪಮಾನ ಗಣನೀಯವಾಗಿ ಏರಿಕೆಯಾಗಿತ್ತು. ಜಿಲ್ಲೆಯ ಎಲ್ಲೂ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ತಂಪಾದ ವಾತಾವರಣವಿತ್ತು. ಅಕ್ಟೋಬರ್ 2 ರಂದು ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ, ಕಾರ್ಕಳ ಹಾಗೂ ಕಾಪು ತಾಲೂಕುಗಳಲ್ಲಿ ಬಿಸಿಲಿನೊಂದಿಗೆ ಮೋಡಕವಿದ ವಾತಾವರಣವಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ. ಮಂಗಳೂರಿನಲ್ಲಿ ಬಿಸಿಲು, ಮೋಡ ಕವಿದ ವಾತಾವರಣ ಹಾಗೂ ಸೆಖೆ ಅನುಭವಕ್ಕೆ ಬಂದಿದೆ. ಮಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಶುಕ್ರವಾರ ಗರಿಷ್ಠ ತಾಪಮಾನ 33.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕರಾವಳಿ ಪ್ರದೇಶದ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.