ಕಾಸರಗೋಡು, ಅ.03 (DaijiworldNews/AA): ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಡಾಲು ಮೇರ್ಕಳದ ಲೆಂಕಿನ್ ಅಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಸವಿತಾ (51) ಎಂದು ಗುರುತಿಸಲಾಗಿದೆ.
ಸವಿತಾ ಶನಿವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಅವರೊಂದಿಗೆ ವಾಸಿಸುತ್ತಿದ್ದ ಕರ್ನಾಟಕದ ಶಿವಮೊಗ್ಗ ಮೂಲದ ಚೆನ್ನಪ್ಪ ಎಂಬುವವರು ನೆರೆಹೊರೆಯವರಿಗೆ ವಿಷಯ ತಿಳಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯ ವರಾಂಡದಲ್ಲಿದ್ದ ಮಂಚದ ಮೇಲೆ ಸವಿತಾ ಅವರ ಶವ ಪತ್ತೆಯಾಗಿದೆ. ಸವಿತಾ ಅವರ ಕೈ ಮತ್ತು ಕಾಲುಗಳ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಅವರ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಮಾಹಿತಿ ತಿಳಿದ ತಕ್ಷಣ ಕುಂಬಳೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆರ್. ಪಿ. ಅನೂಪ್ ಕೃಷ್ಣ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಲೈಫ್ ಮಿಷನ್ ಯೋಜನೆಯಡಿ ವರ್ಷಗಳ ಹಿಂದೆ ನಿರ್ಮಿಸಲಾದ ಮನೆಯಲ್ಲಿ ಸವಿತಾ ಮತ್ತು ಚೆನ್ನಪ್ಪ ವಾಸಿಸುತ್ತಿದ್ದರು. ಚೆನ್ನಪ್ಪ ಕಳೆದ 16 ವರ್ಷಗಳಿಂದ ಸವಿತಾ ಅವರೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಜವಾದ ಕಾರಣ ತಿಳಿದುಬರಲಿದೆ.