ಮಂಗಳೂರು, ಅ.03 (DaijiworldNews/AA): ತಮ್ಮ ಕ್ರೀಡಾ ಪಯಣದಲ್ಲಿ ಎದುರಾದ ಹಲವಾರು ಸವಾಲುಗಳು, ಹಿನ್ನಡೆಗಳು ಮತ್ತು ಗಾಯದ ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿರುವ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ, ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ಮತ್ತೊಂದು ಚಿನ್ನದ ಪದಕದೊಂದಿಗೆ ಹಿಂತಿರುಗುವ ದೃಢ ಸಂಕಲ್ಪ ತೊಟ್ಟಿರುವುದಾಗಿ ಹೇಳಿದ್ದಾರೆ.











ಏಷ್ಯನ್ ಗೇಮ್ಸ್ನ 4×400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನ ಮತ್ತು 4×400 ಮೀ. ಮಿಶ್ರ ರಿಲೇ ಬೆಳ್ಳಿ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರಿಗೆ, ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಮೊಹ್ತಿಶ್ಯಾಂ ಹಾಗೂ ಸಿಟಿ ಸೆಂಟರ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂವಮ್ಮ, "ನನ್ನ ಜೀವನದಲ್ಲಿ ನಾನು ಅನೇಕ ಏಳುಬೀಳುಗಳನ್ನು ಮತ್ತು ಗಾಯದ ಸಮಸ್ಯೆಗಳನ್ನು ಎದುರಿಸಿದ್ದೇನೆ. ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದೇನೆ. ಎಲ್ಲವನ್ನು ಬದುಕಿನಲ್ಲಿ ನೋಡಿದ್ದೇನೆ. ಸಾಧನೆಗೆ ವಯಸ್ಸು ಎಂದಿಗೂ ತಡೆಯಾಗಬಾರದು. ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕದೊಂದಿಗೆ ವಾಪಸಾಗುವೆನು" ಎಂದರು.
ಏಷ್ಯನ್ ಗೇಮ್ಸ್ ರಿಲೇ ಸ್ಪರ್ಧೆಯ ತಮ್ಮ ಅನುಭವವನ್ನು ಹಂಚಿಕೊಂಡ ಪೂವಮ್ಮ, ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರಿಂದ ಈ ಬಾರಿ ಚಿನ್ನದ ಪದಕ ಗೆಲ್ಲಲೇಬೇಕೆಂಬ ದೃಢ ನಿಶ್ಚಯದೊಂದಿಗೆ ಅಖಾಡಕ್ಕಿಳಿದಿದ್ದಾಗಿ ತಿಳಿಸಿದರು.
"ನಾವು 'ಮಾಡೂ ಇಲ್ಲವೇ ಮಡಿ' ಮನೋಭಾವ ಮತ್ತು ಚಿನ್ನದ ಪದಕ ಗೆಲ್ಲುವ ದೃಢ ಸಂಕಲ್ಪದೊಂದಿಗೆ ಟ್ರ್ಯಾಕ್ಗೆ ಕಾಲಿಟ್ಟೆವು. ಬಹ್ರೇನ್ ಮತ್ತು ಚೀನಾದಿಂದ ಪ್ರಬಲ ಪೈಪೋಟಿ ಇದ್ದಾಗ್ಯೂ, ಉತ್ತಮ ಮುನ್ನಡೆ ಸಾಧಿಸುವಲ್ಲಿ ನಾವು ಯಶಸ್ವಿಯಾದೆವು. ಭಾರತದ ರಾಷ್ಟ್ರಗೀತೆ ಮೊಳಗಿದಾಗ ಮತ್ತು ಸುತ್ತಲೂ ಎಲ್ಲರ ಮುಖದಲ್ಲೂ ಹೆಮ್ಮೆಯ ಭಾವನೆಯನ್ನು ಕಂಡ ಕ್ಷಣ ನಿಜಕ್ಕೂ ಅತ್ಯಂತ ವಿಶೇಷವಾಗಿತ್ತು" ಎಂದು ಅವರು ನೆನಪಿಸಿಕೊಂಡರು.
"ಈ ಇತ್ತೀಚಿನ ಸಾಧನೆಯು ಕೇವಲ ಮತ್ತೊಂದು ಪದಕ ಮಾತ್ರವಲ್ಲ, ಬದಲಾಗಿ ವರ್ಷಗಳ ಸಮರ್ಪಣೆ, ಪರಿಶ್ರಮ ಮತ್ತು ಹಿನ್ನಡೆಗಳ ನಂತರವೂ ಮತ್ತೆ ಎದ್ದು ನಿಲ್ಲುವ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಜೀವನದಲ್ಲಿ ಗೆಲುವು ಮತ್ತು ಸೋಲು ಸಹಜ. ನಾವು ಕೇವಲ ಯಶಸ್ಸನ್ನು ಮಾತ್ರ ನಿರೀಕ್ಷಿಸಲು ಸಾಧ್ಯವಿಲ್ಲ. ಸೋಲನ್ನು ಅನುಭವಿಸುವುದು ನಮಗೆ ಇನ್ನಷ್ಟು ಕಷ್ಟಪಟ್ಟು ದುಡಿಯಲು ಮತ್ತು ಮತ್ತೆ ಯಶಸ್ಸಿನತ್ತ ಸಾಗಲು ಶಕ್ತಿಯನ್ನು ನೀಡುತ್ತದೆ" ಎಂದು ಅವರು ಹೇಳಿದರು.
"ತಮ್ಮ ಕ್ರೀಡಾ ಪಯಣ ಇನ್ನೂ ಮುಗಿದಿಲ್ಲ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಿದ್ದೇನೆ. ತಮ್ಮ ಸುದೀರ್ಘ ಮತ್ತು ಯಶಸ್ವಿ ಕ್ರೀಡಾ ಜೀವನವನ್ನು ರೂಪಿಸುವಲ್ಲಿ ತರಬೇತುದಾರರಾದ ವಸಂತ್ ಮತ್ತು ದಿನೇಶ್ ಕುಂದರ್ ಹಾಗೂ ಕುಟುಂಬದ ನಿರಂತರ ಬೆಂಬಲ ಪ್ರಮುಖ ಪಾತ್ರವಹಿಸಿದೆ" ಎಂದು ಶ್ರೇಯಸ್ಸು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೂವಮ್ಮ ಅವರ ತಾಯಿ ಜಾಜಿ ರಾಜು, ತಂದೆ ಎಂ.ಜಿ. ರಾಜು, ಪತಿ ಜಿತಿನ್ ಪಾಲ್, ಮೊಹ್ತಿಶ್ಯಾಂ ಸಂಸ್ಥೆಯ ನಿರ್ದೇಶಕರಾದ ಸೈಯದ್ ಮುಹಮ್ಮದ್ ಅರ್ಶದ್ ಮತ್ತು ಸೈಯದ್ ಮುಹಮ್ಮದ್ ಸವೊದ್, ಪೂವಮ್ಮ ಅವರ ತರಬೇತುದಾರ ದಿನೇಶ್ ಕುಂದರ್, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಎಂಎಲ್ಸಿ ಐವನ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ದಾಯ್ಜಿವರ್ಲ್ಡ್ ಟಿವಿ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೊ ಮತ್ತಿತರರು ಉಪಸ್ಥಿತರಿದ್ದರು.