ಉಡುಪಿ, ಅ.03 (DaijiworldNews/AA): ಉಡುಪಿ ನಗರ, ಮಣಿಪಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮುಂಜಾನೆಯಿಂದಲೇ ದಟ್ಟವಾದ ಮಂಜು ಕವಿದಿದ್ದು, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.



ಸಾಮಾನ್ಯವಾಗಿ ನವೆಂಬರ್ ಅಥವಾ ನಂತರದ ತಿಂಗಳುಗಳಲ್ಲಿ ಇಂತಹ ದಟ್ಟ ಮಂಜು ಕಾಣಿಸಿಕೊಳ್ಳುತ್ತದೆ. ಆದರೆ, ಬೆಳಗ್ಗೆ 7:30 ಕಳೆದರೂ ದಟ್ಟವಾದ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಕಂಡುಬಂದಿರುವ ಈ ಅಪರೂಪದ ವಾತಾವರಣದ ಬದಲಾವಣೆಯು ಸ್ಥಳೀಯರ ಗಮನ ಸೆಳೆದಿದೆ.
ಅಕ್ಟೋಬರ್ ಆರಂಭದಲ್ಲೇ ಈ ರೀತಿ ದಟ್ಟ ಮಂಜು ಕಾಣಿಸಿಕೊಂಡಿರುವುದು ಜನರಲ್ಲಿ ಆಶ್ಚರ್ಯ ಹುಟ್ಟಿಸಿದ್ದರೆ, ಇನ್ನೊಂದೆಡೆ ಹವಾಮಾನದ ಈ ಏರುಪೇರು ರೈತರು ಮತ್ತು ತೋಟಗಾರಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾಗಿರುವುದು ಮುಂಬರುವ ವಾರಗಳಲ್ಲಿ ಹವಾಮಾನ ಹೇಗಿರಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.