ವಿಟ್ಲ, ಅ.03 (DaijiworldNews/AA): ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕದ ಅಡ್ಡೆಗೆ ವಿಟ್ಲ ಠಾಣಾ ಪೊಲೀಸರು ಅ. 2 ರಂದು ಮಧ್ಯಾಹ್ನ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೃಷಪ್ಪ (59), ಲಕ್ಷ್ಮಣ ನಾಯ್ಕ್ (38), ಶೋಬಿತ್ ರಾಜ್ (29) ಹಾಗೂ ಯುವರಾಜ್ (46) ಎಂಬುವವರುಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಪೆರುವಾಯಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ದೊರೆತಿದೆ. ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಧೃಢಪಟ್ಟಿರುತ್ತದೆ.
ಘಟನೆಯಲ್ಲಿ ಪೊಲೀಸರು ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಸ್ಥಳದಲ್ಲಿದ್ದ ಕೋಳಿಗಳನ್ನು, ಆರೋಪಿಗಳು ಕೋಳಿ ಅಂಕಕ್ಕೆ ಉಪಯೋಗಿಸಿದ 3050 ರೂ. ನಗದು, ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 203/2026, ಕಲಂ: 87, 93 KP Act ಮತ್ತು ಕಲಂ: 3,11 (1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಕಲಂ: 112 ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.