ಬೆಳ್ತಂಗಡಿ, ಸೆ 18 (Daijiworld News/MSP): ತಾಲೂಕಿನ ಸುರ್ಯ ರಸ್ತೆಯ ಮನೆಯೊಂದರಲ್ಲಿ ದಾಸ್ತಾನಿರಿಸಿದ್ದ ಆನೆ ದಂತವನ್ನು ಬುಧವಾರ ಪುತ್ತೂರು ಸಂಚಾರಿ ಅರಣ್ಯ ದಳ( ಎಫ್.ಎಂ.ಎಸ್.) ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ 51ಕೆ.ಜಿ. ಆನೆ ದಂತ ವಶಕ್ಕೆ ಪಡೆದ ಘಟನೆ ನಡೆದಿದೆ.


ಖಚಿತ ಮಾಹಿತಿ ಮೇರೆಗೆ ಸುರ್ಯ ಸಮೀಪದ ಮನೆಯೊಂದಕ್ಕೆ ದಾಳಿ ನಡೆಸಿ 51 ಕೆ.ಜಿ.ಯ 10 ಆನೆ ದಂತ ವಶಕ್ಕೆ ಪಡೆದಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಕಳೆದು ಮೂರು ತಿಂಗಳಿಂದ ಆನೆ ದಂತ ದಾಸ್ತಾನು ಇರಿಸಿದ್ದು ಮಾತ್ರವಲ್ಲದೆ ಮಾರಾಟ ಜಾಲದ ಕುರಿತು ಇಲಾಖೆಗೆ ಮಾಹಿತಿ ಲಭಿಸಿತ್ತು.
ಈ ಕುರಿತು ಪ್ರಕರಣ ಭೇದಿಸಿದ ತಂಡ ಸತತ ಕಾರ್ಯಾಚರಣೆ ಬಳಿಕ ಸುರ್ಯ ದೇವಸ್ಥಾನ ರಸ್ತೆಯ ಅಬ್ರಾಹಂ, ಅನ್ವರ್, ಸುರೇಶ್ ಬಾಬು ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಿದೆ. ಮತ್ತೋರ್ವ ತಲೆ ಮರೆಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.ಈ ನಾಲ್ವರು ಹಲವಾರು ವರ್ಷಗಳಿಂದ ಇದೇ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಕೇರಳದಿಂದ ಆನೆ ದಂತ ತಂದಿರುವ ಕುರಿತಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಒಟ್ಟು 5 ಜೋಡಿ ದಂತ ವಶಕ್ಕೆ ಪಡೆಯಲಾಗಿದೆ.
ಪುದುವೆಟ್ಟು ಅರಣ್ಯದಲ್ಲಿ ಆನೆಯೊಂದನ್ನು ಹೊಡೆದುರುಳಿಸಿ ದಂತ ಎಗರಿಸಿರುವ ಕುರಿತು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, 8 ವರ್ಷ ಹಳೆಯ ದಂತವೂ ಸೇರಿದೆ.
ಓರ್ವ ಗಲ್ಫ್ ರಾಷ್ಟ್ರ ದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಊರಿಗೆ ಬಂದು ದಂತ ಸಾಗಾಟ ಕೃತ್ಯದಲ್ಲಿ ತೊಡಗಿಕೊಂಡಿದ್ದಾನೆ.ಪ್ರಕರಣದ ಹಿಂದೆ ದೊಡ್ಡ ಜಾಲವೊಂದು ಇರುವ ಕುರಿತು ಇಲಾಖೆ ಅನುಮಾನ ವ್ಯಕ್ತಪಡಿಸಿದೆ.ಬೆಳ್ತಂಗಡಿ ಅರಣ್ಯ ಇಲಾಖೆಗೆ ಪ್ರಕರಣದ ಮುಂದಿನ ತನಿಖೆಗೆ ಹಸ್ತಾಂತರಿಸಲಿದೆ.