ಉಡುಪಿ, ಸೆ.28 (DaijiworldNews/AA): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇದರ ನಿರ್ದೇಶನದಂತೆ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ವ್ಯಾಪ್ತಿಯ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಂದೇ ದಿನ ಒಟ್ಟು 61,367 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ 261 ರಾಜಿ ಮಾಡಿಕೊಳ್ಳಬಹುದಾದ ಚೆಕ್ ಅಮಾನ್ಯ ಪ್ರಕರಣಗಳು, 79 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 2 ವೈವಾಹಿಕ ವಿವಾದಗಳು, 3,190 ಇತರ ಸಿವಿಲ್ ಪ್ರಕರಣಗಳು, 47 ಮೋಟಾರು ವಾಹನ ಅಪಘಾತ ಪರಿಹಾರ (MACT) ಪ್ರಕರಣಗಳು, 1 ಕಾರ್ಮಿಕ ವಿವಾದ, 3 ಹಣಕಾಸು ಸಂಬಂಧಿತ ಪ್ರಕರಣಗಳು, 12 ಇತರ ಕ್ರಿಮಿನಲ್ ಪ್ರಕರಣಗಳು ಹಾಗೂ 57,772 ವ್ಯಾಜ್ಯಪೂರ್ವ (ಪ್ರಿ-ಲಿಟಿಗೇಶನ್) ಪ್ರಕರಣಗಳು ಸೇರಿವೆ. ಈ ಎಲ್ಲಾ ಪ್ರಕರಣಗಳ ರಾಜಿ ಸಂಧಾನದ ಮೂಲಕ ಒಟ್ಟು ರೂ. 14,45,52,485 ಪರಿಹಾರ ಮೊತ್ತವನ್ನು ಘೋಷಿಸಲಾಗಿದೆ.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳು, ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಮತ್ತು ಬ್ರಹ್ಮಾವರದ ವಕೀಲರ ಸಂಘಗಳು, ಪ್ರಾಸಿಕ್ಯೂಷನ್ ಇಲಾಖೆ, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪನಿಗಳು, ಬ್ಯಾಂಕ್ಗಳು, ಕಕ್ಷಿದಾರರು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಯಾಗಿ ನಡೆದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪತ್ರಿಕಾ ಪ್ರಕಟಣೆ ತಿಳಿಸಿದೆ.