ಉಡುಪಿ, ಸೆ.24 (DaijiworldNews/AA): ಶಾರ್ಜಾದಲ್ಲಿ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಭೀಕರ ಕೊಲೆಯಾಗಿದ್ದು, ಈ ಸಂಬಂಧ ನ್ಯಾಯ ಹಾಗೂ ಸಹಾಯ ಕೋರಿ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ಮನವಿ ಪತ್ರ ಸಲ್ಲಿಸಿದ್ದಾರೆ.

ಘಟನೆಯ ವಿವರಗಳನ್ನು ನೀಡಿದ ಪ್ರಶಾಂತ್ ಕುಂದರ್, "ಜುಲೈ 20 ರಂದು ನಾನು ಪ್ರಕಾಶ್ ಅವರಿಗೆ ಕರೆ ಮಾಡಿದಾಗ ಅವರು ಫೋನ್ ಕಟ್ ಮಾಡಿದ್ದರು. ನಂತರ ಅವರು ನನಗೆ ಸಂದೇಶ ಕಳುಹಿಸಿದರು, ಆದರೆ ಅವರು ಎಂದಿಗೂ ಸಂದೇಶಗಳನ್ನು ಕಳುಹಿಸುತ್ತಿರಲಿಲ್ಲ. ನಾನು ಮತ್ತೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ" ಎಂದಿದ್ದಾರೆ.
"ಅಲ್ವಿನ್ ಪ್ರಕಾಶ್ ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಗದ ಕಾರಣ, ನಾವು ಅವರ ಕಂಪನಿಯ ಹೆಚ್ಆರ್ ವಿಭಾಗವನ್ನು ಸಂಪರ್ಕಿಸಿದೆವು. ಪ್ರಕಾಶ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಅವರು ಮೊದಲು ತಿಳಿಸಿದರು. ಅವರು ಭಾರತಕ್ಕೆ ತಲುಪಿಲ್ಲ ಎಂದು ನಾವು ಅವರಿಗೆ ತಿಳಿಸಿದಾಗ, ಅವರು ಪಾಸ್ಪೋರ್ಟ್ ವಿವರಗಳನ್ನು ಪರಿಶೀಲಿಸಿ ಅವರು ಶಾರ್ಜಾದಲ್ಲೇ ಇದ್ದಾರೆ ಎಂಬುದನ್ನು ಖಚಿತಪಡಿಸಿದರು. ಇದರ ನಂತರ ಅಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಯಿತು" ಎಂದು ವಿವರಿಸಿದ್ದಾರೆ.
"ಶಾರ್ಜಾದಲ್ಲಿ ನಡೆದ ತನಿಖೆಯ ವೇಳೆ ಓಮನ್ ಮಾರ್ಗದಲ್ಲಿ ಕಾರೊಂದರೊಳಗೆ ಎರಡು ಚೀಲಗಳಲ್ಲಿ ಒಂಬತ್ತು ತುಂಡುಗಳಾಗಿ ಕತ್ತರಿಸಿದ ಶವ ಪತ್ತೆಯಾಗಿದೆ. ಅದು ಪ್ರಕಾಶ್ ಅವರ ಶವ ಎಂಬುದು ನಂತರ ದೃಢಪಟ್ಟಿದೆ. ಅಲ್ಲದೆ, ಪ್ರಕಾಶ್ ಅವರ ಪತ್ನಿ ಮತ್ತು ಮಗನ ಸುಳಿವು ಸಿಕ್ಕಿಲ್ಲ" ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್, "ಶಾರ್ಜಾದಲ್ಲಿ ನಡೆದಿದೆ ಎನ್ನಲಾದ ಕೊಲೆಗೆ ಸಂಬಂಧಿಸಿದಂತೆ ಸಹಾಯ ಕೋರಿ ಅಲ್ವಿನ್ ಪ್ರಕಾಶ್ ಕುಂದರ್ ಅವರ ಸಹೋದರ ನನ್ನನ್ನು ಸಂಪರ್ಕಿಸಿದ್ದಾರೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಅಥವಾ ಇಂಟರ್ಪೋಲ್ ನೋಟೀಸ್ ಜಾರಿಯಾಗದ ಹೊರತು ಜಿಲ್ಲಾ ಪೊಲೀಸ್ ಇಲಾಖೆಯು ನೇರ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
"ಆದಾಗ್ಯೂ, ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡುವ ಪ್ರಯತ್ನವಾಗಿ, ದುಬೈನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಇಂಟರ್ಪೋಲ್ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.