ಮಂಗಳೂರು : ಬೈಕಂಪಾಡಿಯಲ್ಲಿ 16ನೇ ‘ಹುಂಡೈ ಟೆಕ್ನಿಕಲ್ ಟ್ರೈನಿಂಗ್ ಅಕಾಡೆಮಿ’ ಉದ್ಘಾಟನೆ
Thu, Sep 24 2026 11:09:56 AM
ಮಂಗಳೂರು, ಸೆ.24 (DaijiworldNews/TA): ಬೆಳೆಯುತ್ತಿರುವ ತಂತ್ರಜ್ಞಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಉನ್ನತ ಮಟ್ಟದ ತರಬೇತಿ ಅಗತ್ಯವಾಗಿದೆ. ತರಬೇತಿ ಮತ್ತು ಕೌಶಲವನ್ನು ಬಳಸಿಕೊಂಡು ಉತ್ತಮ ಉತ್ಪನ್ನ, ಸೇವೆ ಒದಗಿಸಲು ಸಾಧ್ಯ ಎಂದು ಹ್ಯುಂಡೈ ಕಂಪೆನಿಯ ನ್ಯಾಷನಲ್ ಸರ್ವಿಸ್ ನ ಮುಖ್ಯಸ್ಥ ನಿಲೇಶ್ ಶಾ ಹೇಳಿದ್ದಾರೆ. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಅದ್ವೈತ್ ಹ್ಯುಂಡೈನಲ್ಲಿ ಬುಧವಾರದಂದು ಹ್ಯುಂಡೈ ಟೆಕ್ನಿಕಲ್ ಟ್ರೈನಿಂಗ್ ಅಕಾಡೆಮಿ(ಎಚ್ ಟಿಟಿಎ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಕಾರುಗಳಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಮಾಡಲಾಗುತ್ತಿದೆ. ಗ್ರಾಹಕರು ಹಲವಾರು ಆತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯದ ಜ್ಞಾನವನ್ನು ಹೊಂದಿದ್ದು ಹೊಸ ರೀತಿಯ ತಂತ್ರಜ್ಞಾನ ಆಧಾರಿತ ಸೌಲಭ್ಯ, ಸೇವೆಗಳನ್ನು ಬಯಸುತ್ತಾರೆ. ಅವರ ನಿರೀಕ್ಷೆಗಳನ್ನು ಪೂರೈಸಬೇಕಾದ ಸವಾಲು ಕಂಪೆನಿಗಳ ತಂತ್ರಜ್ಞರು, ಉದ್ಯೋಗಿಗಳ ಮೇಲಿರುತ್ತದೆ. ಇದಕ್ಕಾಗಿ ಉತ್ತಮ ತರಬೇತಿ, ಕೌಶಲ ಅತ್ಯಗತ್ಯವಾಗಿರುತ್ತದೆ. ಇದಕ್ಕೆ ಹ್ಯುಂಡೈ ಕಂಪೆನಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಇದೀಗ ಹ್ಯುಂಡೈ ಕಂಪೆನಿ ದೇಶದ 16ನೇ ತರಬೇತಿ ಅಕಾಡೆಮಿಯನ್ನು ಬೈಕಂಪಾಡಿಯಲ್ಲಿ ಆರಂಭಿಸಿದೆ ಎಂದು ಹೇಳಿದರು. ನ್ಯಾಷನಲ್ ಸರ್ವಿಸ್ ನ ಫಂಕ್ಷನ್ ಅಡ್ವೈಸರ್ ಆಮ್ ಅವರು ಮಾತನಾಡಿ, ಕಂಪೆನಿಯು ಗುಣಮಟ್ಟ, ತರಬೇತಿ ಮತ್ತು ಸೇವೆಗೆ ಪ್ರಾಶಸ್ತ್ಯ ನೀಡುತ್ತಿದ್ದು ಗ್ರಾಹಕರ ಬೆಂಬಲದಿಂದ ಬೆಳೆಯುತ್ತಿದೆ ಎಂದು ಹೇಳಿದರು.
ಅದ್ವೈತ್ ಹ್ಯುಂಡೈನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಎಸ್ ಸುಬ್ರಹ್ಮಣ್ಯ ಗುಪ್ತ, ಝೋನಲ್ ಬ್ಯುಸಿನೆಸ್ ಹೆಡ್(ಸೌತ್) ಕೃಪಾಶಂಕರ್, ಝೋನಲ್ ಬ್ಯುಸಿನೆಸ್ ಎಡ್ವೈಸರ್(ಸೌತ್) ಜೆ.ಎಸ್. ಪಾರ್ಕ್, ಝೋನಲ್ ಪಾರ್ಟ್ಸ್ ಆ್ಯಂಡ್ ಸರ್ವಿಸ್ ಹೆಡ್ ತಾನಾಶಂಕರ್ ಎಸ್, ರೀಜನಲ್ ಸೇಲ್ಸ್ ಹೆಡ್ ಧೀರಜ್ ಖತ್ರಿ, ಸರ್ವಿಸ್ ಟ್ರೈನಿಂಗ್ ಡೊಮೈನ್ ಹೆಡ್ ಬದ್ರಿನಾಥ್, ರೀಜನಲ್ ಪಾರ್ಟ್ಸ್ ಆ್ಯಂಡ್ ಸರ್ವಿಸ್ ಹೆಡ್ ರೋಮಿಸ್ ಲ್ಯೂಕ್, ಸರ್ವಿಸ್ ಟ್ರೈನಿಂಗ್ ಸೀನಿಯರ್ ಮ್ಯಾನೇಜರ್ ಸತೀಶ್, ಟೆರಿಟರಿ ಪಾರ್ಟ್ಸ್ ಆ್ಯಂಡ್ ಸರ್ವಿಸ್ ಮ್ಯಾನೇಜರ್ ಲ್ಯಾನ್ಸಿ ರೆಬೆಲ್ಲೊ ಉಪಸ್ಥಿತರಿದ್ದರು. ಅನುರಾಗ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಇಲ್ಲಿ ತರಬೇತಿಯ ಜತೆಗೆ 52 ಮಂದಿ ಉಳಿದುಕೊಳ್ಳಲು ಹಾಸ್ಟೆಲ್, ಕಿಚನ್, ಆಟದ ಮೈದಾನ, ಯೋಗಾಭ್ಯಾಸ ವಲಯ, ಜಾಗಿಂಗ್ ಟ್ರ್ಯಾಕ್ ಮೊದಲಾದವುಗಳನ್ನು ಒಳಗೊಂಡಿದೆ. ಇಲ್ಲಿ 90 ದಿನಗಳ ತರಬೇತಿ ನೀಡಲಾಗುತ್ತದೆ ಎಂದು ಅದ್ವೈತ್ ಹ್ಯುಂಡೈನ ಸರ್ವಿಸ್ ಡೈರೆಕ್ಟರ್ ಶಿವರಾಮ ಕೃಷ್ಣ ಅವರು ತಿಳಿಸಿದರು.