ಕಾಸರಗೋಡು, ಸೆ.22 (DaijiworldNews/AA): ತಮ್ಮ ಜಮೀನಿನ ಹಕ್ಕು ಪತ್ರ ಹಾಗೂ ಪ್ರಮುಖ ದಾಖಲೆಗಳನ್ನು ಪಡೆಯಲು ಬರೋಬ್ಬರಿ 27 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದು ರೋಸಿಹೋಗಿದ್ದ 74 ವರ್ಷದ ವೃದ್ಧರೊಬ್ಬರು ಮಂಗಳವಾರ ಬೆಳಗ್ಗೆ ಬದಿಯಡ್ಕದ ಬಿಎಸ್ಎನ್ಎಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಾಟಕೀಯ ಘಟನೆ ನಡೆದಿದೆ.







ಮೊಬೈಲ್ ಟವರ್ ಏರಿದ ವೃದ್ಧನನ್ನು ಬದಿಯಡ್ಕದ ಮಾಜಿ ಸ್ಟುಡಿಯೋ ಮಾಲೀಕ, ನಾರಂಪಾಡಿ ನಿವಾಸಿ ಪಿ. ಕೆ. ಮೋಹನ್ದಾಸ್ ಎಂದು ಗುರುತಿಸಲಾಗಿದೆ.
ಲಭ್ಯವಿರುವ ವಿವರಗಳ ಪ್ರಕಾರ, ಮಂಗಳವಾರ ಬೆಳಗ್ಗೆ ಸುಮಾರು 8:30 ರ ಸುಮಾರಿಗೆ ಮೋಹನ್ದಾಸ್ ಅವರು ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದು, ಕುತ್ತಿಗೆಗೆ ನೇಣಿನ ಕುಣಿಕೆ ಬಿಗಿದುಕೊಂಡು ಬಿಎಸ್ಎನ್ಎಲ್ ಟವರ್ ಏರಿದ್ದಾರೆ. ತಮ್ಮನ್ನು ರಕ್ಷಿಸಲು ಯಾರಾದರೂ ಹತ್ತಿರ ಬಂದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಅಥವಾ ಟವರ್ನಿಂದ ಕೆಳಗೆ ಹಾರುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಬದಿಯಡ್ಕ ಪೊಲೀಸರು ಹಾಗೂ ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ವೃದ್ಧನನ್ನು ಕೆಳಗಿಳಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಅಂತಿಮವಾಗಿ, ಮೊಬೈಲ್ ಫೋನ್ ಕರೆ ಮಾಡುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಅಗ್ನಿಶಾಮಕ ಸಿಬ್ಬಂದಿ ಉಪಾಯವಾಗಿ ಟವರ್ ಏರಿ, ಸುಮಾರು ಮೂರು ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಅವರನ್ನು ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದಾರೆ.
ಮೋಹನ್ದಾಸ್ ಅವರು ತಮ್ಮ ಜಮೀನಿನ ಹಕ್ಕುಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ಪಡೆಯಲು ಕಳೆದ 27 ವರ್ಷಗಳಿಂದ ಕಂದಾಯ ಕಚೇರಿಗಳಿಗೆ ಅಲೆಯುತ್ತಿದ್ದರು ಎಂದು ತಿಳಿದುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ಅವರು ಈ ತೀವ್ರ ಹಂತದ ನಿರ್ಧಾರಕ್ಕೆ ಕೈಹಾಕಿದ್ದಾರೆ.
ಮೋಹನ್ದಾಸ್ ಅವರು ಈ ರೀತಿ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಅವರು ತಮ್ಮ ಬೇಡಿಕೆಗಳಿಗಾಗಿ ನಾಲ್ಕು ಬಾರಿ ಮರ ಹಾಗೂ ಟವರ್ ಏರಿದ್ದು, ಪ್ರತಿ ಬಾರಿಯೂ ಅಧಿಕಾರಿಗಳು ಭರವಸೆ ನೀಡಿ ಕೆಳಗಿಳಿಸಿದ್ದರು. ಆದರೆ ಅಧಿಕಾರಿಗಳು ನೀಡಿದ ಭರವಸೆ ಈಡೇರದ ಕಾರಣ ಮಂಗಳವಾರ ಮತ್ತೆ ಟವರ್ ಏರಿದ್ದಾರೆ. 2018 ರಲ್ಲಿ ಅವರು ಡೆಪ್ಯುಟಿ ಕಮಿಷನರ್ ಕಚೇರಿ ಆವರಣದಲ್ಲಿದ್ದ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ನಡೆದ ಘಟನೆಯು ತಮ್ಮ ಹಕ್ಕುಗಳಿಗಾಗಿ ಅವರು ಟವರ್ ಏರಿದ ಐದನೇ ಘಟನೆಯಾಗಿದೆ.