ಉಡುಪಿ, ಸೆ.22 (DaijiworldNews/AA): ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆಯ ದೊಡ್ಡಮನೆಯ ಗಣೇಶ್ ಶೆಟ್ಟಿ ಎಂಬುವವರ ದನದ ಕೊಟ್ಟಿಗೆಯ ಹಿಂಭಾಗದಲ್ಲಿ ಕಪ್ಪು ಚಿರತೆ ಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.


ಜನವಸತಿ ಪ್ರದೇಶದ ತೀರಾ ಸಮೀಪದಲ್ಲೇ ಕಾಡುಪ್ರಾಣಿ ಕಾಣಿಸಿಕೊಂಡಿರುವುದರಿಂದ ಬೇಳಂಜೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮುಖಂಡ ಅಮೃತ್ ಕುಮಾರ್ ಶೆಟ್ಟಿ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಲು ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಗಸ್ತು ಚುರುಕುಗೊಳಿಸಬೇಕು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.