ಮಂಗಳೂರು, ಸೆ.22 (DaijiworldNews/TA): ನಗರದ ಕಾವೂರು ಮುಳ್ಳಕಾಡ್ನಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಸೆ.22ರ ತಡರಾತ್ರಿ ನಡೆದಿದೆ. ಮೃತರನ್ನು ಕಾವೂರು ನಿವಾಸಿ ಅಜ್ಮಲ್ ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ರಾತ್ರಿ ಸುಮಾರು 1.30ರ ವೇಳೆಗೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿದ್ದ ಹಂಪ್ಸ್ ಗಮನಿಸದೆ ಆಟೋ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದೆ. ಪಲ್ಟಿಯಾದ ಆಟೋ ಚಾಲಕನ ಎದೆ ಮೇಲೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ವೇಳೆ ಈ ಭಾಗದಲ್ಲಿ ರಾತ್ರಿ ವಾಹನ ಸಂಚಾರ ಕಡಿಮೆ ಇತ್ತು ಎನ್ನಲಾಗಿದ್ದು, ಪಲ್ಟಿಯಾದ ರಿಕ್ಷಾವನ್ನು ಮೇಲೆತ್ತಿ ಚಾಲಕನನ್ನು ರಕ್ಷಿಸಲು ತಕ್ಷಣ ಯಾರೂ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಚಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.