ಮೂಡುಬಿದಿರೆ, ಸೆ.22 (DaijiworldNews/TA): ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯುವ ಮುಖಂಡರಾಗಿ ಸಕ್ರಿಯರಾಗಿದ್ದ ಎಕ್ಕಾರು ನಿವಾಸಿ ಪ್ರತೀಕ್ ಶೆಟ್ಟಿ (39) ಅವರು ಅನಾರೋಗ್ಯದಿಂದ ಸೆ.22ರಂದು ನಿಧನರಾದರು.

ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದ ಪ್ರತೀಕ್ ಶೆಟ್ಟಿ ಅವರು ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಹಿಂದೆ ಮಂಡಲ ಯುವಮೋರ್ಚಾದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಜಿಲ್ಲಾ ಬಿಜೆಪಿ ಯುವಮೋರ್ಚಾದಲ್ಲಿಯೂ ಸಕ್ರಿಯರಾಗಿದ್ದರು.
ಪ್ರತೀಕ್ ಶೆಟ್ಟಿ ಅವರು ಎಕ್ಕಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದರು. ಪ್ರತೀಕ್ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.