ಬಂಟ್ವಾಳ, ಸೆ.21 (DaijiworldNews/AK): ಅನಂತಾಡಿ ಗ್ರಾಮದ ಬಾಬನಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಕಾಲುದಾರಿ ಬಂದ್ ಮಾಡಲಾಗಿದ್ದ ಪ್ರಕರಣ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯ ಮಧ್ಯ ಪ್ರವೇಶದ ಮೂಲಕ ತಾತ್ಕಾಲಿಕವಾಗಿ ಮತ್ತೆ ತೆರೆಯಲಾಗಿದೆ.

ಸದ್ಯ ಕಾಲುದಾರಿಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಾಬನಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಕಾಲುದಾರಿ ಬಂದ್ ಮಾಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕುರಿತು ಮಾಧ್ಯಮ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ವರದಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿಯವರು ದ.ಕ. ಜಿಲ್ಲಾಧಿಕಾರಿಗೆ ಪತ್ರ ಮೂಲಕ ಪ್ರಕರಣದ ವಾಸ್ತವಾಂಶ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈ ಗೊಂಡು ಅನುಪಾಲನಾ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಆದೇಶಿಸಿದ್ದರು.
ಈ ಆದೇಶ ಹಿನ್ನೆಲೆಯಲ್ಲಿ ವಿಟ್ಲ ಹೋಬಳಿಯ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ಸೆ.10ರಂದು ವರದಿ ಸಲ್ಲಿಸಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ವರದಿ ಪ್ರಕಾರ, ಅನಂತಾಡಿ ಗ್ರಾಮದ ಸರ್ವೇ ನಂ. 137/2ಎ1ರ 0.24 ಎಕರೆ ಪಟ್ಟಾ ಜಮೀನಿನ ಮೂಲಕ ಪೂಂಜಾವು, ನಡುಮನೆ ಹಾಗೂ ಸುಧೆಕಟ್ಟೆಮಾರು ಪ್ರದೇಶಗಳಿಗೆ ಹಿಂದಿನಿಂದಲೂ ಕಾಲು ದಾರಿ ಸಂಪರ್ಕವಿತ್ತು. ಈ ಜಮೀನು ಭಾಗ್ಯಲಕ್ಷ್ಮೀ ಕೆ. ಹೆಗ್ಡೆ ಎಂಬವರ ಹೆಸರಿನಲ್ಲಿದ್ದು, ಕಾಲುದಾರಿಯನ್ನು ಬಂದ್ ಮಾಡಲಾಗಿತ್ತು. ಸ್ಥಳ ಪರಿಶೀಲನೆಯ ವೇಳೆ ಜಮೀನಿನ ಪಟ್ಟಾದಾರರನ್ನು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಲಾಗಿದ್ದು, ಬಂದ್ ಮಾಡಲಾಗಿದ್ದ ಕಾಲುದಾರಿಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಅನಂತಾಡಿ ಗ್ರಾಮದ ಸರ್ವೇ ನಂ. 136/2ಎ1ರ ಸರಕಾರಿ ಜಾಗವನ್ನು ಅಳತೆ ಮಾಡಿ, ಈ ಹಿಂದೆ ಪ್ಲಾಟಿಂಗ್ನಲ್ಲಿ ತೋರಿಸಲಾಗಿದ್ದ ರಸ್ತೆಗೆ ಸಂಬಂಧಿಸಿದ ಸರಕಾರಿ ಜಾಗವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮಾರ್ಗದಲ್ಲಿ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜಮೀನು ಅಳತೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹಿಂದಿನಂತೆಯೇ ಕಾಲುದಾರಿಯಲ್ಲಿ ಸಾರ್ವಜನಿಕರು ಸಂಚರಿಸಲು ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ತಿಳಿಸಿದ್ದಾರೆ.