ಮಂಗಳೂರು, ಸೆ.21 (DaijiworldNews/AK): ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಶಾಸ್ತ್ರೀಯ ನೃತ್ಯ ರಿಯಾಲಿಟಿ ಶೋ 'ನಟನಂ' ತನ್ನ ಭವ್ಯ ಸಾಂಸ್ಕೃತಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಹಾಗೂ ದಾಯ್ಜಿವರ್ಲ್ಡ್ 24x7 ವಾಹಿನಿಯ ಜಂಟಿ ಸಹಯೋಗದೊಂದಿಗೆ ಕಳೆದ 13 ತಿಂಗಳುಗಳಿಂದ ಪ್ರಸಾರವಾಗುತ್ತಿದ್ದ ಈ ನೃತ್ಯ ಸ್ಪರ್ಧೆಯು ಕಲಾಭಿಮಾನಿಗಳ ಅಪಾರ ಪ್ರೀತಿಗೆ ಪಾತ್ರವಾಗಿತ್ತು.
















ಆರಂಭಿಕ ಆಡಿಷನ್ ಹಂತದಲ್ಲಿ ಭಾಗವಹಿಸಿದ್ದ 60ಕ್ಕೂ ಹೆಚ್ಚು ಕಲಾವಿದರಲ್ಲಿ ಕಠಿಣ ಸ್ಪರ್ಧೆಯನ್ನು ದಾಟಿ ಅಂತಿಮ ಹಂತಕ್ಕೆ 7 ಅತ್ಯುತ್ತಮ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಮಂಗಳೂರಿನ ಡಾನ್ ಬೋಸ್ಕೊ ಹಾಲ್ನಲ್ಲಿ ನಡೆದ ಭವ್ಯ ಗ್ರಾಂಡ್ ಫಿನಾಲೆಯಲ್ಲಿ ಕಠಿಣ ಸವಾಲನ್ನು ಎದುರಿಸಿ ಉಡುಪಿಯ ಪನ್ನಗ ರಾವ್ ಪ್ರಥಮ ಸ್ಥಾನ ಗಳಿಸಿ 50,000 ರೂಪಾಯಿ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರೆ, ಹೊಸಬೆಟ್ಟುವಿನ ಶ್ರೀಕಾರಿ ದ್ವಿತೀಯ ಸ್ಥಾನದೊಂದಿಗೆ 25,000 ರೂಪಾಯಿ ಬಹುಮಾನ ಪಡೆದುಕೊಂಡರು. ತೃತೀಯ ಸ್ಥಾನವನ್ನು ಇಬ್ಬರು ಸಾಧಕರು ಹಂಚಿಕೊಂಡು ತಲಾ 15,000 ರೂಪಾಯಿ ಬಹುಮಾನ ಗಳಿಸಿದರೆ, ಸಮಾಧಾನಕರ ಬಹುಮಾನವಾಗಿ ತಲಾ 10,000 ರೂಪಾಯಿ ನಗದು ಮತ್ತು ನಟರಾಜನ ಬೆಳ್ಳಿ ವಿಗ್ರಹ ನೀಡಿ ಗೌರವಿಸಲಾಯಿತು.
ಇನ್ನು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ವಿದುಷಿ ಶುಭ ಧನಂಜಯ್, ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಭವ್ಯ ಗ್ರಾಂಡ್ ಫಿನಾಲೆಯ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿದುಷಿ ವೀಣಾ ಎಂ ಸಮಗ, ವಿದ್ವಾನ್ ಪ್ರಮೋದ್ ಕುಲಾಲ್ ಉಳ್ಳಾಲ್ , ವಿದುಷಿ ದೀಕ್ಷಾ ರಾಮಕೃಷ್ಣ, ವಿದ್ವಾನ್ ಸುಮಂಗಲಾ ರತ್ನಾಕರ್ ರಾವ್ , ವಿದುಷಿ ಶ್ರೀವಿಧ್ಯಾ ಮಂಗಳೂರು, ವಿದುಷಿ ಡಾ. ದಾಕ್ಷಾಯಿಣೀ ಕಂದೂರು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಡ್ ಸಂಸ್ಥೆಯ ಕಾರ್ಯಾಚರಣೆ ನಿರ್ದೇಶಕ ಮೆಲ್ವಿನ್ ರೊಡ್ರಿಗಸ್, ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟಲಿನೋ, ದಾಯ್ಜಿವರ್ಲ್ಡ್ ಸಂಸ್ಥೆಯ ಹೆಚ್. ಆರ್ ರೋನಾಲ್ಡ್ ನಜರೆತ್, ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌರೋ, ವಿವಿಧ ನಾಟ್ಯಾಲಯದ ನಾಟ್ಯಗುರುಗಳು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಕಿರುತೆರೆಯ ಮೂಲಕ ಮನೆಮನೆಗೆ ತಲುಪಿಸುವಲ್ಲಿ 'ನಟನಂ' ರಿಯಾಲಿಟಿ ಶೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದ ಈ ಕಾರ್ಯಕ್ರಮ ಕರಾವಳಿಯ ಸಾಂಸ್ಕೃತಿಕ ಲೋಕಕ್ಕೆ ಹೊಸ ಮೆರುಗು ನೀಡಿದೆ.