ಪುತ್ತೂರು, ಸೆ.21 (DaijiworldNews/TA): ಏಳು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ವೈಭವದಿಂದ ಸಂಪನ್ನಗೊಂಡಿದೆ.

ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆದ ಉತ್ಸವದ ಸಮಾರೋಪದ ಅಂಗವಾಗಿ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ನಡೆಯಿತು. ಚೆಂಡೆ, ತಾಸೆ ಹಾಗೂ ಸರ್ವವಾದ್ಯಗಳ ನಾದ, ವಿವಿಧ ಜನಪದ ಕಲಾ ಪ್ರದರ್ಶನಗಳು ಮತ್ತು ಭಕ್ತರ ಅಪಾರ ಪಾಲ್ಗೊಳ್ಳುವಿಕೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ರಾತ್ರಿ 9.20ರ ಸುಮಾರಿಗೆ ಸ್ಥಳ ಭೂಮಿಯ ದೈವ ರಕ್ತೇಶ್ವರಿ ಹಾಗೂ ಕಾರೆಕ್ಕಾಡಿನ ಪಂಜುರ್ಲಿ ದೈವದ ಕೋಲ ನಡೆಯಿತು. ಬಳಿಕ ಶ್ರೀ ಮಹಾಗಣಪತಿಗೆ ಮಹಾಪೂಜೆ ನೆರವೇರಿಸಲಾಯಿತು.
ಏಳು ದಿನಗಳ ಉತ್ಸವಕ್ಕೆ ಸಮರ್ಪಣಾ ಭಾವದಿಂದ ಸಹಕರಿಸಿದವರಿಗೆ ಶ್ರೀ ದೇವತಾ ಸಮಿತಿ ಅಧ್ಯಕ್ಷರ ವತಿಯಿಂದ ಪ್ರಸಾದ ವಿತರಿಸಲಾಯಿತು. ಮಹಾಪೂಜೆಯ ಬಳಿಕ ರಾತ್ರಿ 10.42ರ ಸುಮಾರಿಗೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ವೇದಿಕೆಯಿಂದ ಹೊರಟಿತು. ರಾತ್ರಿ 10.48ರ ಸುಮಾರಿಗೆ ಕಿಲ್ಲೆ ಮೈದಾನದ ದ್ವಾರ ದಾಟಿದ ಮೆರವಣಿಗೆಗೆ ಸುಡುಮದ್ದು ಪ್ರದರ್ಶನ ಮತ್ತಷ್ಟು ಮೆರುಗು ನೀಡಿತು.
ಚೆಂಡೆ, ತಾಸೆ, ಸರ್ವವಾದ್ಯ ಹಾಗೂ ಸ್ಯಾಕ್ಸೋಫೋನ್ಗಳ ನಾದದ ನಡುವೆ ಸಾಗಿದ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ತಮ್ಮ ಪ್ರತಿಭೆ ಪ್ರದರ್ಶಿಸಿದವು. ಶ್ರೀ ಮಹಾಲಿಂಗೇಶ್ವರ ದೇವರ ಬೃಹತ್ ಭಾವಚಿತ್ರ ಹೊತ್ತ ವಾಹನ, ತಾಲೀಮು ಪ್ರದರ್ಶನ, ಗೊಂಬೆ ಕುಣಿತ, ಕುಣಿತ ಭಜನೆ ಸೇರಿದಂತೆ ಹಲವು ಕಲಾ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಶ್ರೀ ಮಹಾಗಣಪತಿಯ ಮೂರ್ತಿಯೊಂದಿಗೆ ದೈವಗಳೂ ಶೋಭಾಯಾತ್ರೆಯಲ್ಲಿ ಸಾಗಿದ ದೃಶ್ಯ ಭಕ್ತರ ಗಮನ ಸೆಳೆಯಿತು. ನೆಲ್ಲಿಕಟ್ಟೆ ದಿ. ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ವಿವಿಧ ತಂಡಗಳ ಕಲಾ ಪ್ರದರ್ಶನಗಳು ವಿಶೇಷ ಆಕರ್ಷಣೆಯಾದವು.
ಮಂಗಳೂರಿನ ಮುನೀಶ್ವರ ವ್ಯಾಯಾಮ ಶಾಲೆಯ ವತಿಯಿಂದ ಕಿಲ್ಲೆ ಮೈದಾನದಲ್ಲಿ ತಾಲೀಮು ಪ್ರದರ್ಶನ ನಡೆಯಿತು. ಶಕ್ತಿಪ್ರದರ್ಶನದ ವಿವಿಧ ಕಸರತ್ತುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಇದೇ ವೇಳೆ ಶಿಲ್ಪಾ ಗೊಂಬೆ ಬಳಗದ ವತಿಯಿಂದ ತುಳುನಾಡಿನ ಜನಪದ ಸೊಗಡನ್ನು ಬಿಂಬಿಸುವ ಗೊಂಬೆಗಳ ಪ್ರದರ್ಶನ ನಡೆಯಿತು. ಅರವಿಂದ ಬೋಳಾರ್ ಸೇರಿದಂತೆ ತುಳು ನಾಟಕ ಕ್ಷೇತ್ರದ ಕಲಾವಿದರ ಗೊಂಬೆಗಳು ಹಾಗೂ ಮೋಟು-ಪಟ್ಟು ಗೊಂಬೆಗಳು ಗಮನ ಸೆಳೆದವು.
ಏಳು ದಿನಗಳ ಗಣೇಶೋತ್ಸವದ ಅವಧಿಯಲ್ಲಿ ಕಿಲ್ಲೆ ಮೈದಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಜನೆ, ಸ್ಯಾಕ್ಸೋಫೋನ್ ವಾದನ, ಸಂಗೀತ ಕಛೇರಿ, ವಿವಿಧ ನೃತ್ಯ ಕಾರ್ಯಕ್ರಮಗಳು, ಯಕ್ಷಗಾನ, ಮಕ್ಕಳ ಯಕ್ಷಗಾನ ಹಾಗೂ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ಇದರಿಂದ ಕಿಲ್ಲೆ ಮೈದಾನವು ಗಣೇಶೋತ್ಸವದ ಆಚರಣೆಯ ಜೊತೆಗೆ ವಿವಿಧ ಕಲಾ ಪ್ರಕಾರಗಳಿಗೂ ವೇದಿಕೆಯಾಗಿ ರೂಪುಗೊಂಡಿತ್ತು. ವೈಭವದ ಶೋಭಾಯಾತ್ರೆಯು ಕೋರ್ಟ್ ರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆ, ರಾಧಾಕೃಷ್ಣ ಮಂದಿರ ಹಾಗೂ ಬೊಳುವಾರು ಮಾರ್ಗವಾಗಿ ಸಾಗಿತು. ಬಳಿಕ ಮಂಜಲ್ಪಡು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ ನೆರವೇರಿಸುವ ಮೂಲಕ ಏಳು ದಿನಗಳ ಮಹಾಗಣೇಶೋತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಎಳೆಯಲಾಯಿತು.
1957ರಲ್ಲಿ ಆರಂಭಗೊಂಡ ಪುತ್ತೂರು ಕಿಲ್ಲೆ ಮೈದಾನದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಇದೀಗ 68ನೇ ವರ್ಷಕ್ಕೆ ತಲುಪಿದೆ. ಗಣೇಶನ ಪೂಜೆ, ಹೋಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶೋಭಾಯಾತ್ರೆಯ ಜೊತೆಗೆ ತುಳುನಾಡಿನ ಸಂಪ್ರದಾಯದಂತೆ ರಕ್ತೇಶ್ವರಿ ಮತ್ತು ಕಾರೆಕ್ಕಾಡು ಪಂಜುರ್ಲಿ ಸೇರಿದಂತೆ ದೈವಗಳ ಕೋಲವನ್ನು ಆಯೋಜಿಸುವುದು ಈ ಉತ್ಸವದ ವಿಶೇಷತೆಯಾಗಿದೆ. ಧಾರ್ಮಿಕ ಆಚರಣೆ, ತುಳುನಾಡಿನ ಜನಪದ ಸೊಗಡು, ಸಂಗೀತ, ಯಕ್ಷಗಾನ, ನಾಟಕ ಹಾಗೂ ವಿವಿಧ ಕಲಾ ಪ್ರದರ್ಶನಗಳ ಮೂಲಕ ಏಳು ದಿನಗಳ ಉತ್ಸವವು ಭಕ್ತರು ಹಾಗೂ ಕಲಾಸಕ್ತರ ಗಮನ ಸೆಳೆಯಿತು.