ಕಾಪು, ಸೆ.21 (DaijiworldNews/AA): ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ, ಕಳತ್ತೂರು ಗ್ರಾಮದ ನಿವಾಸಿ, ಉಮರಬ್ಬ (64), ಕಳತ್ತೂರು ನಿವಾಸಿಗಳಾದ ಮೊಹಮ್ಮದ್ ಶರೀಫ್ (31), ಶಂಸುದ್ದೀನ್ (57) ಹಾಗೂ ಮೊಹಮ್ಮದ್ ಅಸೀರ್ (24) ಬಂಧಿತ ಆರೋಪಿಗಳು.
ದೂರಿನ ಪ್ರಕಾರ, ಸೆಪ್ಟೆಂಬರ್ 19 ರಂದು ಸಂಜೆ ಸುಮಾರು 4 ಗಂಟೆಗೆ ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುಡ್ಡೆ ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರು ತಮ್ಮ ಐದು ಜಾನುವಾರುಗಳ ಪೈಕಿ ಎರಡು ವರ್ಷದ ಕಪ್ಪು ಬಣ್ಣದ ಹಸುವೊಂದು ಕಾಣೆಯಾಗಿರುವುದನ್ನು ಗಮನಿಸಿದರು. ಹಸುವನ್ನು ಹುಡುಕುತ್ತಿದ್ದಾಗ ಸಮೀಪದಲ್ಲೇ ಗೂಡ್ಸ್ ಟೆಂಪೋವೊಂದು ನಿಂತಿರುವುದು ಕಂಡುಬಂದಿದೆ. ವಾಹನವನ್ನು ಪರಿಶೀಲಿಸಿದಾಗ, ಕಾಣೆಯಾಗಿದ್ದ ಹಸು ಹಾಗೂ ಇನ್ನೊಂದು ಹಸುವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ.
ಈ ವಾಹನದ ಬಳಿ ಉಮರಬ್ಬ ಮತ್ತು ಇತರ ಮೂವರು ಇದ್ದರೆನ್ನಲಾಗಿದೆ. ದೂರುದಾರರು ಬಂದಿರುವುದನ್ನು ಗಮನಿಸಿದ ಆರೋಪಿಗಳು ಕೂಡಲೇ ಟೆಂಪೋದಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ವಸಂತಿ ಸುನೀತಾ ಕ್ವಾಡ್ರಸ್ ನೀಡಿದ ದೂರಿನ ಆಧಾರದ ಮೇಲೆ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಸೆಪ್ಟೆಂಬರ್ 19 ರಂದೇ ಆರೋಪಿ ಉಮರಬ್ಬ (64) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನುಳಿದಂತೆ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶರೀಫ್, ಶಂಸುದ್ದೀನ್ ಹಾಗೂ ಮೊಹಮ್ಮದ್ ಅಸೀರ್ ನನ್ನು ಸೆಪ್ಟೆಂಬರ್ 20 ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಟೆಂಪೋ ವಾಹನ ಹಾಗೂ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಇಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಶಿರ್ವ ಪಿಎಸ್ಐ ಮಂಜುನಾಥ ಮರಬದ, ಪಡುಬಿದ್ರಿ ಪಿಎಸ್ಐ ಶಕ್ತಿವೇಲು ಇ, ಅನಿಲ್ ಕುಮಾರ್ ಟಿ ನಾಯಕ್, ಹೆಬ್ರಿ ಪಿಎಸ್ಐ ಲೋಹಿತ್ ಕುಮಾರ್ ಸೇರಿದಂತೆ ಶಿರ್ವ, ಕಾಪು, ಪಡುಬಿದ್ರಿ ಪೊಲೀಸ್ ಠಾಣೆಗಳ ಸಿಬ್ಬಂದಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ತಂಡ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.