ಉಡುಪಿ, ಸೆ.21 (DaijiworldNews/AA): ಕಠಿಣ ತರಬೇತಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಇನ್ಶಾ ತಸ್ಕೀನ್ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಉಡುಪಿ ತಾಲೂಕಿನ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ಶಾ ತಸ್ಕೀನ್ ಅವರು ಉಡುಪಿ ನಗರದ ಬೈಲೂರು ನಿವಾಸಿಗಳಾದ ಇಕ್ಲಾಕ್ ಅಹಮದ್ ಹಾಗೂ ಸೈಯದ್ ತಬಸ್ಸುಮ್ ದಂಪತಿಯ ಪುತ್ರಿ. ಅವರ ಸಹೋದರ ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ಶಾ ಅವರು ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಎಲ್ಕೆಜಿಯಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದರು. ಬಳಿಕ ಪೈಲಟ್ ಆಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಉದ್ದೇಶದಿಂದ ರೆಡ್ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡರು.
ದೆಹಲಿಯ ರೆಡ್ಬರ್ಡ್ ಸಂಸ್ಥೆಯಲ್ಲಿ ಒಂದು ವರ್ಷದ ತರಬೇತಿ ಕಾರ್ಯಕ್ರಮದಲ್ಲಿ ಅವರು ಗ್ರೌಂಡ್ ಕ್ಲಾಸ್ಗಳಿಗೆ ಹಾಜರಾಗಿ, ಅಗತ್ಯ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಎಲ್ಲ ಪರೀಕ್ಷೆಗಳನ್ನೂ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಉತ್ತೀರ್ಣರಾದರು.
ತರಬೇತಿಯ ಮುಂದಿನ ಹಂತವಾಗಿ ಬೆಳಗಾವಿ ಫ್ಲೈಯಿಂಗ್ ಬೇಸ್ನಲ್ಲಿ 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡರು.
ಕಠಿಣ ತರಬೇತಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿರುವ ಇನ್ಶಾ ತಸ್ಕೀನ್ ಅವರು ಉಡುಪಿ ಜಿಲ್ಲೆಯ ಯುವತಿಯರಿಗೆ, ವಿಶೇಷವಾಗಿ ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಸ್ಫೂರ್ತಿಯಾಗಿದ್ದಾರೆ.
"ಆರಂಭದಲ್ಲಿ ನನಗೆ ಪೈಲಟ್ ಆಗುವ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ನಾನು ಎಸ್ಎಸ್ಎಲ್ಸಿ ಓದುತ್ತಿದ್ದಾಗ ಒಮ್ಮೆ ದೆಹಲಿಗೆ ಪ್ರಯಾಣಿಸಿದ್ದೆವು. ಅಲ್ಲಿನ ವಿಮಾನ ನಿಲ್ದಾಣವನ್ನು ನೋಡಿದಾಗ ಪೈಲಟ್ ಆಗಬೇಕೆಂಬ ಆಸೆ ಮೂಡಿತು. ಕುಟುಂಬದವರ ಬೆಂಬಲದಿಂದ ನನ್ನ ಕನಸನ್ನು ನನಸಾಗಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಕೆಲಸ ಮಾಡುವುದರ ಜೊತೆಗೆ ವಿಮಾನಯಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬುದು ನನ್ನ ಕನಸು" ಎಂದು ಕ್ಯಾಪ್ಟನ್ ಇನ್ಶಾ ತಸ್ಕೀನ್ ತಿಳಿಸಿದ್ದಾರೆ.