ಕಾಸರಗೋಡು, ಸೆ.17 (DaijiworldNews/TA): ಶ್ರೀಧನ್ಯ ಸುರೇಶ್ ಅವರು ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿ (ಡಿಸಿ)ಯಾಗಿ ಬುಧವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಆಡಳಿತಾತ್ಮಕ ಜವಾಬ್ದಾರಿಗಳನ್ನು ಶ್ರೀಧನ್ಯ ಸುರೇಶ್ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.



ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶ್ರೀಧನ್ಯ ಸುರೇಶ್ ಅವರನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಪಿ. ಉದಯಕುಮಾರ್ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ಅರ್ಜುನ್ ಪಾಂಡಿಯನ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಶ್ರೀಧನ್ಯ ಸುರೇಶ್ ಅವರು ಕೇರಳದ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯದಿಂದ ಜಿಲ್ಲಾಧಿಕಾರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಹುದ್ದೆ ವಹಿಸಿಕೊಂಡ ಎರಡನೇ ಮಹಿಳಾ ಅಧಿಕಾರಿಯೂ ಆಗಿದ್ದಾರೆ.
2018ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 410ನೇ ರ್ಯಾಂಕ್ ಗಳಿಸಿದ ಅವರು, ಕೇರಳದ ಬುಡಕಟ್ಟು ಸಮುದಾಯದಿಂದ ಐಎಎಸ್ಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ವಯನಾಡು ಜಿಲ್ಲೆಯ ಸಾಮಾನ್ಯ ಕುಟುಂಬದಿಂದ ಬಂದಿರುವ ಶ್ರೀಧನ್ಯ ಸುರೇಶ್ ಅವರು ಕಠಿಣ ಪರಿಶ್ರಮದ ಮೂಲಕ ನಾಗರಿಕ ಸೇವೆಗೆ ಪ್ರವೇಶಿಸಿದ್ದಾರೆ. ಈ ಹಿಂದೆ ಆಹಾರ ಸುರಕ್ಷತಾ ಆಯುಕ್ತರು ಹಾಗೂ ನೋಂದಣಿ ಇನ್ಸ್ಪೆಕ್ಟರ್ ಜನರಲ್ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಧನ್ಯ ಸುರೇಶ್, ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು. “ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕಾಸರಗೋಡಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು” ಎಂದು ಅವರು ಹೇಳಿದರು.