ಮಂಗಳೂರು, ಸೆ.16 (DaijiworldNews/AA): ಕರ್ನಾಟಕ ರಾಜ್ಯ ಸರ್ಕಾರವು ಸೆ. 18ರಂದು ಮಂಗಳೂರು ನಗರದ ಪಡೀಲ್ನಲ್ಲಿರುವ ಜಿಲ್ಲಾಧಿಕಾರಿರವರ ಕಛೇರಿಯಲ್ಲಿ (ಪ್ರಜಾಸೌಧ) ಸಚಿವ ಸಂಪುಟ ಸಭೆಯನ್ನು ಹಮ್ಮಿಕೊಂಡಿರುತ್ತದೆ. ಹೀಗಾಗಿ ನಗರದಲ್ಲಿನ ವಾಹನ ದಟ್ಟಣೆ ಹಾಗೂ ಭದ್ರತಾ ದೃಷ್ಠಿಯಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸರು ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ಹಿನ್ನೆಲೆ ಸೆ. 17 ರ ಸಂಜೆ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಹಾಗೂ ಸಂಪುಟ ದರ್ಜೆಯ ಸಚಿವರು ಜಿಲ್ಲೆಗೆ ಆಗಮಿಸಲಿದ್ದಾರೆ. ಸೆ. 18ರಂದು ಬೆಳಗ್ಗೆ ಮಂಗಳೂರು ನಗರದ ಮುಖ್ಯರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ ಮೇರಿಹಿಲ್ನಲ್ಲಿರುವ ಹೆಲಿಪ್ಯಾಡ್ ಮುಖಾಂತರ ಉಡುಪಿಗೆ ತೆರಳಿ ನಂತರ ಮಂಗಳೂರು ನಗರಕ್ಕೆ ವಾಪಸ್ಸಾಗಿ ತಂಗಲಿದ್ದು, ನಂತರ ಮರು ದಿನ ಬೆಳಿಗ್ಗೆ ನಿರ್ಗಮಿಸಲಿರುತ್ತಾರೆ. ಈ ಹಿನ್ನೆಲೆ ನಗರದಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ಗಣ್ಯರ ಭದ್ರತೆ ದೃಷ್ಠಿಯಿಂದ ಹಾಗೂ ನಗರದಲ್ಲಿ ಸಂಚಾರ ಸುವ್ಯವಸ್ಥೆ ಹಿತದೃಷ್ಠಿಯಿಂದ ಸಾರ್ವಜನಿಕರು ಸುರಕ್ಷಿತವಾಗಿ ಪರ್ಯಾಯ ಮಾರ್ಗಗಳನ್ನು ಬಳಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಗಣ್ಯರ ಸಂಚಾರ ಇರುವ ರಸ್ತೆಗಳು:-
* ಸೆ. 17 ರ ಸಂಜೆ ಮತ್ತು ಸೆ.19 ರ ಬೆಳಗ್ಗೆ:
ಬಜಪೆ ವಿಮಾನ ನಿಲ್ದಾಣದಿಂದ ಕಾವೂರು - ಬೋಂದೆಲ್ - ಮೇರಿಹಿಲ್ - ಕೆ.ಪಿ.ಟಿ. - ಕದ್ರಿ ಕಂಬಳ - ಬಂಟ್ಸ್ ಹಾಸ್ಟೆಲ್ - ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್ - ಹಂಪನ್ ಕಟ್ಟೆ - ಕ್ಲಾಕ್ ಟವರ್ - ಹ್ಯಾಮಿಲ್ಟನ್ ಜಂಕ್ಷನ್.
* ಸೆ. 18 ರಂದು ಬೆಳಗ್ಗೆ:
ಹ್ಯಾಮಿಲ್ಟನ್ ಜಂಕ್ಷನ್ - ಕ್ಲಾಕ್ ಟವರ್- ಹಂಪನಕಟ್ಟ - ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್ - ಕೆ.ಪಿ.ಟಿ.ಜಂಕ್ಷನ್ - ನಂತೂರು ವೃತ್ತ - ಪಂಪ್ವೆಲ್ - ನಾಗುರಿ - ಬಜಾಲ್ ಕ್ರಾಸ್ (ಪ್ರಜಾಸೌಧ)- ಪಡೀಲ್ ಜಂಕ್ಷನ್.
ವಿಶೇಷ ಸೂಚನೆ: ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.
ಪರ್ಯಾಯ ಮಾರ್ಗಗಳು:-
* ಬದ್ರಿಯಾ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್ - ನಿಲೇಶ್ವರ ರಸ್ತೆ - ರೋಸಾರಿಯೋ ರಸ್ತೆ ಮುಖೇನಾ ಸಂಚರಿಸುವುದು.
* ಅದೇ ರೀತಿ ಹ್ಯಾಮಿಲ್ಟನ್ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್ - ನೆಲ್ಲಿಕಾಯಿ ರಸ್ತೆ ಮುಖೇನಾ ಸಂಚರಿಸುವುದು.
* ಪಂಪ್ವೆಲ್ ಜಂಕ್ಷನ್ನಿಂದ ನಾಗುರಿ ಮೂಲಕ ಪಡಿಲ್ ಜಂಕ್ಷನ್ ಕಡೆಗೆ ಅಥವಾ ಪಡಿಲ್ ಜಂಕ್ಷನ್ ಕಡೆಯಿಂದ ನಾಗುರಿ ಮೂಲಕ ಪಂಪ್ವೆಲ್ ಕಡೆಗೆ ಸಂಚರಿಸಬೇಕಾದ ಎಲ್ಲಾ ತರಹದ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ - ಕೈಕಂಬ - ಮರೋಳಿ ಮೂಲಕ ಅಥವಾ ತೊಕ್ಕೊಟ್ಟು - ದೇರಳಕಟ್ಟೆ - ಮುಡಿಪು - ಬೊಳ್ಯಾರ್ - ಮೆಲ್ಕಾರ್ ಮೂಲಕ ಸಂಚರಿಸುವುದು.
* ಬಜಾಲ್ ಕ್ರಾಸ್(ಪ್ರಜಾಸೌಧ) ನಿಂದ ಬಜಾಲ್ ಕಡೆಗೆ ಅಥವಾ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ಕಡೆಗೆ ಬರುವ ಮತ್ತು ಹೋಗುವ ಎಲ್ಲಾ ತರಹದ ವಾಹನಗಳು ಪಡಿಲ್ ಬಜಾಲ್ ಕ್ರಾಸ್ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ - ಬಜಾಲ್ ಮೂಲಕ ಸಂಚರಿಸುವುದು.
* ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು - ಮಂಗಳಾದೇವಿ ಮೂಲಕ ನಗರಕ್ಕೆ ಸಂಚರಿಸುವುದು.