ವಿಟ್ಲ, ಸೆ.16 (DaijiworldNews/AA): ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೊದಲ ಘಟನೆಗೆ ಸಂಬಂಧಪಟ್ಟಂತೆ ಚಾಲಕ ವೀರಕಂಭ ನಿವಾಸಿ ಮಹಮ್ಮದ್ ತೌಕಿರ್ (26), ಲಾರಿ ಮಾಲಿಕ ಮೊಹಮ್ಮದ್ ಸಿಮ್ರಾನ್ ಹಾಗೂ ಅಕ್ರಮ ಕೃತ್ಯಕ್ಕೆ ಸಹಕರಿಸಿದ ಸಜೀರ್ ಹಾಗೂ ಎರಡನೇ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಕನ್ಯಾಡಿ ನಿವಾಸಿ ಚಂದ್ರೇಶ್ (40) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣರವರಿಗೆ ಸೆ. 14ರಂದು ರಾತ್ರಿ ಕೇರಳ ಕಡೆಯಿಂದ ಕನ್ಯಾನ ಕಡೆಗೆ ಲಾರಿಯಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಖಚಿತ ಮಾಹಿತಿ ಮೇರೆಗೆ ಅವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಲಾರಿಯೊಂದನ್ನು ತಡೆದು ಪರಿಶೀಲಿಸಿದಾಗ ಪರವಾನಿಗೆ ಅಥವಾ ದಾಖಲಾತಿ ಇಲ್ಲದೇ ಕೆಂಪು ಕಲ್ಲು ಸಾಗಿಸುತ್ತಿರುವುದು ಕಂಡುಬಂದಿರುತ್ತದೆ. ಬಳಿಕ ಲಾರಿಯನ್ನು ಪೊಲೀಸರು ಸ್ವಾಧೀನಪಡೆಸಿಕೊಂಡಿದ್ದಾರೆ. ಈ ಸಂಬಂಧ ಸಿ, ಲಾರಿ ಚಾಲಕ ವೀರಕಂಭ ನಿವಾಸಿ ಮಹಮ್ಮದ್ ತೌಕಿರ್, ಲಾರಿ ಮಾಲಿಕ ಮೊಹಮ್ಮದ್ ಸಿಮ್ರಾನ್ ಹಾಗೂ ಅಕ್ರಮ ಕೃತ್ಯಕ್ಕೆ ಸಹಕರಿಸಿದ ಸಜೀರ್ ವಿರುದ್ಧ ವಿಟ್ಲ ಠಾಣೆಯಲ್ಲಿ ಅಕ್ರ 193/2026, ಕಲಂ: 303(2) BNS, 4(1), 4(1A), 21 MMDR (MINES AND MINERALS REGULATION OF DEVELOPMENT) ACT 1957 ಕಲಂ. 3, 44 KARNATAKA MINOR MINERAL CONSISTENT RULE 1994, ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅದೇ ದಿನ ತಡರಾತ್ರಿ ಕುದ್ದುಪದವು ಮಾರ್ಗವಾಗಿ ಕಲ್ಲಡ್ಕ-ಕಾಂಞಗಾಡ್ ಅಂತರ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಯಲ್ಲಿ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೇ ಕೆಂಪು ಕಲ್ಲು ಸಾಗಿಸುತ್ತಿರುವುದನ್ನು ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರು ಪತ್ತೆ ಮಾಡಿದ್ದಾರೆ. ಬಳಿಕ ಲಾರಿಯನ್ನು ವಶಪಡಿಸಿಕೊಂಡು ಕೊಂಡು ಬೆಳ್ತಂಗಡಿ ಕನ್ಯಾಡಿ ನಿವಾಸಿ ಚಂದ್ರೇಶ್ ವಿರುದ್ಧ ವಿಟ್ಲ ಠಾಣೆಯಲ್ಲಿ ಅಕ್ರ 194/2026, ಕಲಂ: 303(2) BNS, 4(1), 4(1A), 21 MMDR (MINES AND MINERALS REGULATION OF DEVELOPMENT) ACT 1957 ಕಲಂ. 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.