ಕಾರ್ಕಳ, ಸೆ.15 (DaijiworldNews/AA): ತಾಲೂಕು ಕಚೇರಿ ಸಮೀಪದ ಮಕ್ಕಳ ಉದ್ಯಾನವನದಬಳಿ ಸುಮಾರು ಒಂದೂವರೆ ವರ್ಷದಿಂದ ಎರಡು ವರ್ಷದೊಳಗಿನ ಗಂಡು ಕಡವೆಯೊಂದು ಮಂಗಳವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಕ್ಕಂದೂರು ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಿನಿಂದ ಜಿಂಕೆ ದಾರಿ ತಪ್ಪಿ ಈ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದವರು ಕಡವೆಯ ಮೃತದೇಹವನ್ನು ಗಮನಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡವೆಯ ತಲೆ ಹಾಗೂ ಕೊಂಬುಗಳ ಭಾಗದಲ್ಲಿ ಸಣ್ಣಪುಟ್ಟ ಗಾಯಗಳು ಕಂಡುಬಂದಿವೆ. ಪಶುವೈದ್ಯರ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಆತಂಕದಿಂದ ಹೃದಯಾಘಾತಪಟ್ಟು ಕಡವೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಕಡವೆಯ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಅರುಣ್ ತಿಳಿಸಿದ್ದಾರೆ.