ಮಂಗಳೂರು, ಸೆ.15 (DaijiworldNews/AK): ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸೆ.೧೮ ರಂದು ಮಂಗಳೂರಿನಲ್ಲಿ ಅಧಿವೇಶನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಕಾರಣ ಮಂಗಳೂರಿನ ರಂಗೋಲಿ ಕಲಾವಿದೆ ವೀಣಾ ಐತಾಳ್ ರವರು ಮುಖ್ಯಮಂತ್ರಿಯವರ ರಂಗೋಲಿ ಕಲಾಕೃತಿಯನ್ನು ರಚಿಸಿದ್ದಾರೆ.

ಕಲಾಕೃತಿಯ ಛಾಯಾಚಿತ್ರಕ್ಕೆ ಚೌಕಟ್ಟು ನಿರ್ಮಿಸಿ ನಾಡಿದ್ದು ಇದನ್ನು ಮುಖ್ಯಮಂತ್ರಿಯವರಿಗೆ ನೀಡಲಿದ್ದಾರೆ. ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯ ಮಂತ್ರಿಯ ಅಧಿವೇಶನ ಕಾರ್ಯಕ್ರಮದ ಸಮೀಪ 20 ಅಡಿ ಉದ್ದಗಲದ 2 ಬೃಹತ್ ರಂಗೋಲಿ ಕಲೆಯ ಕಲಾಕೃತಿಯನ್ನು ಮಾಡಲಿದ್ದಾರೆ.
ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾದ ಯಕ್ಷಗಾನ ಮತ್ತು ಕಂಬಳದ ವಿನ್ಯಾಸವನ್ನು ಈ ಕಲಾಕೃತಿಗಳಲ್ಲಿ ಮಾಡಲಿದ್ದಾರೆ. ವೀಣಾ ಐತಾಳರು ಈಗಾಗಲೇ ಹಲವಾರು ರಂಗೋಲಿ ಕಲಾಕೃತಿಗಳನ್ನು ಅಲ್ಲಲ್ಲಿ ಮಾಡಿರುತ್ತಾರೆ. ಇವರ ರಂಗೋಲಿಯ ವಿಶೇಷವೆಂದರೆ ಕಡು ಮತ್ತು ತಿಳಿ ಬಣ್ಣವನ್ನು ಮಿಶ್ರ ಮಾಡಿ, ಆ ರಂಗೋಲಿಗೆ ಸಹಜ ಭಾವ, ನೈಜ ಜೀವ ನೀಡುವ ಪ್ರಬುದ್ಧತೆಯನ್ನು ಹೊಂದಿರುತ್ತಾರೆ. 18 ರ ಕಾರ್ಯಕ್ರಮಕ್ಕೆ ಇಂದಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಕಲಾಕೃತಿ ಮಾಡಲು ಆರಂಭಿಸಿದ್ದಾರೆ.