ಕಾರ್ಕಳ, ಸೆ.13 (DaijiworldNews/AA): ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಕಾರ್ಕಳ ತಾಲೂಕು ನಿವಾಸಿ ವಿಘ್ನೇಶ್ ಪ್ರಸಾದ್ ರಾವ್ ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 12ರಂದು ರಾತ್ರಿ ಸುಮಾರು 10 ಗಂಟೆಗೆ ಅವರು ಫೇಸ್ಬುಕ್ನಲ್ಲಿ ಈ ವಿಡಿಯೋವನ್ನು ಗಮನಿಸಿದ್ದಾರೆ. ಪ್ರಸಾದ್ ಶೆಟ್ಟಿ ಹೆಸರಿನ ಫೇಸ್ಬುಕ್ ಖಾತೆಯಿಂದ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋದಲ್ಲಿ ಶಾಸಕ ಸುನಿಲ್ ಕುಮಾರ್ ಅವರ ಚಿತ್ರವನ್ನು ಎಡಿಟ್ ಮಾಡಿ, ಅವರ ತಲೆ ಕಡಿದಿರುವಂತೆ ಚಿತ್ರಿಸಲಾಗಿದೆ. ಜೊತೆಗೆ ಅಶ್ಲೀಲ ಹಾಗೂ ಪ್ರಚೋದನಕಾರಿ ಆಡಿಯೋ, ಚಲನಚಿತ್ರದ ಹಾಡನ್ನು ಬಳಸಲಾಗಿದ್ದು, ಶಾಸಕರ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸುವ ರೀತಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪೋಸ್ಟ್ ಸಾರ್ವಜನಿಕರನ್ನು ಪ್ರಚೋದಿಸುವ, ಶಾಂತಿ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಮತ್ತು ಚುನಾಯಿತ ಪ್ರತಿನಿಧಿಯ ವಿರುದ್ಧ ಜನರನ್ನು ಎತ್ತಿಕಟ್ಟುವ ಉದ್ದೇಶ ಹೊಂದಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 55, 192, 351(3) ಹಾಗೂ 353(1)(c) ಅಡಿಯಲ್ಲಿ ಕ್ರೈಂ ನಂ. 74/2026ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಆರೋಪಿ ಎಂದು ಗುರುತಿಸಲಾಗಿರುವ ಪ್ರಸಾದ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ.