ಮಂಗಳೂರು, ಸೆ. 13 (DaijiworldNews/TA): ಕಂಕನಾಡಿ ಹಳೆ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಪಂಪ್ವೆಲ್ನಿಂದ ನಗರ ಪ್ರವೇಶಿಸುವ ವಾಹನಗಳನ್ನು ನಂತೂರು ಹಾಗೂ ಕದ್ರಿ ಶಿವಬಾಗ್ ಮಾರ್ಗವಾಗಿ ಪೊಲೀಸರು ತಿರುಗಿಸಿದ ಪರಿಣಾಮ ಈ ಪ್ರದೇಶಗಳಲ್ಲೂ ಭಾರೀ ಸಂಚಾರ ದಟ್ಟಣೆ ಕಂಡುಬಂದಿತು.

ಪಂಪ್ವೆಲ್ನಿಂದ ಕಂಕನಾಡಿ ಕಡೆಗೆ ಸಾಗುವ ಏಕಮುಖ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಕೆಎಸ್ಆರ್ಟಿಸಿ ಬಸ್ ಕೆಟ್ಟು ನಿಂತಿತ್ತು. ಬಸ್ ರಸ್ತೆಯ ಮಾರ್ಗವನ್ನೇ ಸಂಪೂರ್ಣವಾಗಿ ನಿರ್ಬಂಧಿಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಪರಿಸ್ಥಿತಿ ನಿಯಂತ್ರಿಸಲು ಸಂಚಾರ ಪೊಲೀಸರು ಪಂಪ್ವೆಲ್ನಿಂದ ನಗರಕ್ಕೆ ಬರುವ ವಾಹನಗಳನ್ನು ನಂತೂರು ಮೂಲಕ ತಿರುಗಿಸಿದರು. ಇದರಿಂದ ನಂತೂರು ಜಂಕ್ಷನ್ ಹಾಗೂ ಕದ್ರಿ ಶಿವಬಾಗ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಯಿತು.
ಶನಿವಾರವಾಗಿದ್ದರಿಂದ ಶಾಲಾ ವಾಹನಗಳ ಸಂಖ್ಯೆಯೂ ಹೆಚ್ಚಿದ್ದು, ಸಂಚಾರ ದಟ್ಟಣೆ ಮತ್ತಷ್ಟು ಬಿಗಡಾಯಿಸಿತು. ಕಂಕನಾಡಿ ಕಡೆಗೆ ತೆರಳಲು ಪರ್ಯಾಯ ಮಾರ್ಗವಿಲ್ಲದ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕರು ಪಂಪ್ವೆಲ್ನಿಂದ ಕಂಕನಾಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಇನ್ನು ವಾರಾಂತ್ಯದ ರಜೆ ಹಾಗೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಖರೀದಿ ಭರಾಟೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು. ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್, ಲೇಡಿ ಗೋಶೆನ್ ರಸ್ತೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಲಾಲ್ಬಾಗ್, ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಕದ್ರಿ, ಬಿಜೈ ಹಾಗೂ ಕೆಎಸ್ಆರ್ಟಿಸಿ ಜಂಕ್ಷನ್ ಭಾಗಗಳಲ್ಲಿಯೂ ಸಂಚಾರ ದಟ್ಟಣೆ ಕಂಡುಬಂದಿದ್ದು, ನಗರದ ಹಲವೆಡೆ ವಾಹನ ಸವಾರರು ನಿಧಾನಗತಿಯ ಸಂಚಾರದಿಂದಾಗಿ ತೊಂದರೆ ಅನುಭವಿಸಿದರು.