ಬೆಳ್ತಂಗಡಿ, ಸೆ. 13 (DaijiworldNews/TA): ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರ ಜೀವ, ಕೃಷಿ ಹಾಗೂ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗದಂತೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಂಗಪೂಜೆ ನೆರವೇರಿಸಿದ್ದಾರೆ.

ಕಾಡಾನೆಗಳು ಗ್ರಾಮಗಳತ್ತ ಬಂದಾಗ ಸೌತಡ್ಕ ಮಹಾಗಣಪತಿಗೆ ಮೊರೆ ಹೋಗುವುದು ಈ ಭಾಗದ ಹಲವು ಗ್ರಾಮಸ್ಥರ ನಂಬಿಕೆಯಾಗಿದೆ. ಆನೆ ಹಾವಳಿ ಕಡಿಮೆಯಾಗಲಿ, ಜನರು ಹಾಗೂ ಕೃಷಿ ಸುರಕ್ಷಿತವಾಗಿರಲಿ ಎಂಬ ಆಶಯದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳೂ ಇದೀಗ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಗಮನ ಸೆಳೆದಿದೆ.
ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಆರಂಭವಾದಾಗ ಸ್ಥಳೀಯರು ಸೌತಡ್ಕ ಮಹಾಗಣಪತಿಗೆ ಹರಕೆ ಹೊತ್ತುಕೊಳ್ಳುವ ಪದ್ಧತಿ ಇದೆ ಎನ್ನಲಾಗಿದೆ. ಆನೆಗಳು ಕೃಷಿ ಪ್ರದೇಶಗಳಿಗೆ ಬಂದು ಬೆಳೆಗಳಿಗೆ ಹಾನಿ ಮಾಡದೆ ತೆರಳಿದರೆ ಅವಲಕ್ಕಿ ಪ್ರಸಾದ ಸಮರ್ಪಿಸುವುದಾಗಿ ಹರಕೆ ಹೊರುವ ಸಂಪ್ರದಾಯವೂ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹರಕೆ ಹೊತ್ತ ಬಳಿಕ ಆನೆಗಳು ಗದ್ದೆಗಳ ಬಳಿ ಬಂದರೂ ಬೆಳೆ ನಾಶಪಡಿಸದೆ ಹಿಂತಿರುಗಿದ ಹಲವು ಘಟನೆಗಳನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
ಕಾಡಾನೆಗಳ ಹಾವಳಿಯಿಂದ ಸಾರ್ವಜನಿಕರಿಗೆ ಜೀವಹಾನಿಯಾಗದಂತೆ, ಕೃಷಿ ಮತ್ತು ಆಸ್ತಿಪಾಸ್ತಿಗೆ ನಷ್ಟವಾಗದಂತೆ ಹಾಗೂ ಆನೆಗಳ ಹಾವಳಿ ನಿಯಂತ್ರಣಕ್ಕೆ ಬರಲಿ ಎಂಬ ಉದ್ದೇಶದಿಂದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ರಂಗಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಎಫ್ಒ ರಾಜವರ್ಧನ್, ಡಿಎಫ್ಒಗಳಾದ ಶಿವಾನಂದ, ಯತೀಂದ್ರ, ಸುನಿಲ್, ವಿನಯ್, ಪ್ರವೀಣ್, ಭವಾನಿ ಶಂಕರ್ ಹಾಗೂ ಹರಿಪ್ರಸಾದ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಗಸ್ತು ಅರಣ್ಯಪಾಲಕರಾದ ಸುನಿಲ್ ನಾಯಕ್, ನಾಗರಾಜ್, ದಿವಾಕರ ರೈ, ದೀಕ್ಷಾ, ಸವಿತಾ, ಶಿವಾನಂದ ಕುಡುರಿ ಹಾಗೂ ಸಚಿನ್ ವಾಜರ್ ಸೇರಿದಂತೆ ಹಲವು ಸಿಬ್ಬಂದಿ ಉಪಸ್ಥಿತರಿದ್ದರು.
ಕರಾವಳಿ, ತುಳುನಾಡು ಹಾಗೂ ಮಲೆನಾಡಿನ ಕೆಲವು ದೇವಾಲಯಗಳಲ್ಲಿ ರಂಗಪೂಜೆಗೆ ವಿಶೇಷ ಸ್ಥಾನವಿದೆ. ಆಯಾ ದೇವಾಲಯದ ಸಂಪ್ರದಾಯಕ್ಕೆ ಅನುಗುಣವಾಗಿ ನೈವೇದ್ಯ, ದೀಪಾರಾಧನೆ ಹಾಗೂ ವಿವಿಧ ಪೂಜಾ ವಿಧಿಗಳು ಈ ಸಂದರ್ಭದಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಗರ್ಭಗುಡಿಯಿಂದ ಧ್ವಜಸ್ತಂಭದವರೆಗೆ ಹಲಗೆಗಳನ್ನು ಹಾಕಿ, ಅದರ ಮೇಲೆ ಬಿಳಿ ಬಟ್ಟೆಯನ್ನು ಹಾಸಲಾಗುತ್ತದೆ. ತುದಿ ಎಲೆಗಳನ್ನು ಇಟ್ಟು ಅನ್ನ, ಕಡುಬು, ಪಂಚಕಜ್ಜಾಯ ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಮರ್ಪಿಸಲಾಗುತ್ತದೆ. ತೆಂಗಿನಕಾಯಿ, ಅಪ್ಪ, ಬಾಳೆಹಣ್ಣು, ವೀಳ್ಯದೆಲೆ ಸೇರಿದಂತೆ ಹಲವು ವಸ್ತುಗಳನ್ನು ಅರ್ಪಿಸಲಾಗುತ್ತದೆ. ಬಳಿಕ ದೀಪಾರಾಧನೆ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರುತ್ತವೆ.
ತುಳುನಾಡಿನ ದೇವಾಲಯ ಸಂಸ್ಕೃತಿಯಲ್ಲಿ ಹಲವು ಹರಕೆ ಸೇವೆಗಳು ಹಾಗೂ ಜನಪದ ಆಚರಣೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿವೆ. ರಂಗಪೂಜೆಯೂ ಅಂತಹ ಪರಂಪರೆಗಳಲ್ಲಿ ಒಂದಾಗಿದೆ. ಕಾಡಾನೆ ಹಾವಳಿಯಿಂದ ಜನರು, ಕೃಷಿ ಮತ್ತು ಆಸ್ತಿಪಾಸ್ತಿಯನ್ನು ರಕ್ಷಿಸಬೇಕೆಂಬ ಆಶಯದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೌತಡ್ಕ ಮಹಾಗಣಪತಿಗೆ ಸಲ್ಲಿಸಿದ ಈ ಪೂಜೆ, ಸ್ಥಳೀಯ ನಂಬಿಕೆ ಹಾಗೂ ತುಳುನಾಡಿನ ದೇವಾಲಯ ಪರಂಪರೆಯೊಂದಿಗೆ ಬೆಸೆದುಕೊಂಡ ಮತ್ತೊಂದು ವಿಶಿಷ್ಟ ಸಂದರ್ಭವಾಗಿ ಗಮನ ಸೆಳೆದಿದೆ.