ಬೆಳ್ತಂಗಡಿ, ಸೆ. 13 (DaijiworldNews/TA): ಕೃಷಿ ಭೂಮಿಗೆ ಅತಿಕ್ರಮವಾಗಿ ಪ್ರವೇಶಿಸಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಜಾತಿ ನಿಂದನೆ ಮಾಡಿದ್ದಲ್ಲದೆ, ಜೀವ ಬೆದರಿಕೆ ಹಾಕಿ, ಕೃಷಿ ಬೆಳೆಗಳಿಗೆ ಹಾನಿ ಹಾಗೂ ಬೇಲಿ ಹಾಕುವ ಮೂಲಕ ಸುಮಾರು 1.30 ಲಕ್ಷ ರೂ. ನಷ್ಟ ಉಂಟುಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳ್ತಂಗಡಿಯ ಹೊಸಂಗಡಿ ನಿವಾಸಿ ಹನೀಫ್ ಎಂದು ಗುರುತಿಸಲಾಗಿದೆ.

ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 7ರಂದು ಮಹಿಳೆ ಇತರರೊಂದಿಗೆ ತನ್ನ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿ ಹನೀಫ್ ಆಸ್ತಿಗೆ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆರೋಪಿ ಮಹಿಳೆಯನ್ನು ಜಾತಿ ಆಧಾರಿತವಾಗಿ ನಿಂದಿಸಿ, ಅಶ್ಲೀಲ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡಿದ್ದಾನೆ. ಅಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದರ ಜೊತೆಗೆ ಕೃಷಿ ಬೆಳೆಗಳಿಗೆ ಹಾನಿ ಮಾಡಿದ್ದು, ಜಮೀನಿಗೆ ಬೇಲಿ ಹಾಕುವ ಮೂಲಕ ಒಟ್ಟು ಸುಮಾರು 1.30 ಲಕ್ಷ ರೂ. ನಷ್ಟ ಉಂಟುಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮಹಿಳೆ ಸೆಪ್ಟೆಂಬರ್ 8ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವೇಣೂರು ಠಾಣೆಯಲ್ಲಿ ಅಪರಾಧ ಸಂಖ್ಯೆ 63/2026ರಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ವೇಣೂರು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.