ಬಂಟ್ವಾಳ, ಆ. 31 (DaijiworldNews/AK): ಬೈಕ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಸವಾರ ಸಾವನ್ನಪ್ಪಿದ್ದ ಘಟನೆ ಸಜಿಪಮೂಡ ಗ್ರಾಮದ ಕಂದೂರು-ಪೆಲತ್ತಕಟ್ಟೆ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ನಂದಾವರ-ಸುನ್ನಿ ನಗರದ ನಿವಾಸಿ ಮುಹಮ್ಮದ್ ರಶೀಕ್ (25) ಎಂದು ಗುರುತಿಸಲಾಗಿದ್ದು, ಈತ ನಂದಾವರ ಶಾಲೆಯ ಬಳಿ ಗ್ಯಾರೇಜ್ ನಡೆಸುತ್ತಿದ್ದ.
ವರದಿಗಳ ಪ್ರಕಾರ, ರಶೀಕ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಜಿಪಮೂಡ ಕಡೆಗೆ ಪ್ರಯಾಣಿಸುತ್ತಿದ್ದಾಗ ಪೆಲತ್ತಕಟ್ಟೆಯಲ್ಲಿ ಅಪಘಾತ ಸಂಭವಿಸಿದೆ. ಶಿವಾಜಿ ಕುಮಾರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಸ್ಥಳೀಯರು ಗಾಯಗೊಂಡ ರಶೀಕ್ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಪಘಾತ ನಡೆದ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಾವರ ನಿವಾಸಿ ಝಾನುಲ್ ಅಬಿದೀನ್ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಶೀಕ್ ಅವರ ಪೋಷಕರು, ಸಹೋದರ, ಸಹೋದರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.