ಪುತ್ತೂರು, ಆ. 23 (DaijiworldNews/AA): ವಂದೇ ಭಾರತ್ ರೈಲು ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ನಡೆಸುತ್ತಿದ್ದ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ. ಗುರುವಾರ ರಾತ್ರಿ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ದಾಟಿ ಪುತ್ತೂರು ರೈಲು ನಿಲ್ದಾಣದ ಮೂಲಕ ಮಂಗಳೂರಿನತ್ತ ಸಂಚರಿಸಿತು.

ಕಳೆದ ಹಲವು ದಿನಗಳಿಂದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿತ್ತು. ಇದೀಗ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ದಾಟಿ ಪುತ್ತೂರು ಮೂಲಕ ಮಂಗಳೂರು ತಲುಪಿರುವುದು ಪ್ರಾಯೋಗಿಕ ಸಂಚಾರದ ಪ್ರಮುಖ ಹಂತವನ್ನು ಪೂರ್ಣಗೊಳಿಸಿದಂತಾಗಿದೆ.
ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ರೈಲು ಸಂಚರಿಸುವುದು ಹಲವು ತಾಂತ್ರಿಕ ಸವಾಲುಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ರೈಲಿನ ಸಂಚಾರವನ್ನು ಮುಂದಿನ ಹಂತಕ್ಕೆ ವಿಸ್ತರಿಸುವ ಮೊದಲು ಹಲವು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಾಯಿತು.
ಪ್ರಾಯೋಗಿಕ ಸಂಚಾರದ ವೇಳೆ ರೈಲ್ವೆ ಅಧಿಕಾರಿಗಳು ಹಳಿಯ ವಿವಿಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ್ದಾರೆ. ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ತಿದ್ದುಪಡಿ ಹಾಗೂ ಕಾಮಗಾರಿಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಮಂಗಳೂರು–ಸಕಲೇಶಪುರ ರೈಲು ಮಾರ್ಗವು ವಂದೇ ಭಾರತ್ ರೈಲಿನ ಸಂಚಾರಕ್ಕೆ ಸೂಕ್ತವಾಗಿದೆ ಎಂಬುದನ್ನು ರೈಲ್ವೆ ಇಲಾಖೆ ಖಚಿತಪಡಿಸಿಕೊಂಡ ಬಳಿಕ ಈ ಮಾರ್ಗದಲ್ಲಿ ನಿಯಮಿತ ವಂದೇ ಭಾರತ್ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಇದರ ನಡುವೆ, ಮಾರ್ಗದ ವಿವಿಧ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ನೀಡಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಈ ವಿಭಾಗದಲ್ಲಿ ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಲು ತಾಂತ್ರಿಕವಾಗಿ ಸಾಧ್ಯ ಎಂಬುದರ ಕುರಿತು ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.
ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ರೈಲ್ವೆ ಇಲಾಖೆಯ ಮಾರ್ಗ ಪರಿಶೀಲನೆ ಹಾಗೂ ತಾಂತ್ರಿಕ ಮೌಲ್ಯಮಾಪನದತ್ತ ಗಮನ ಹರಿದಿದೆ. ಮಂಗಳೂರು–ಸಾಕಲೇಶಪುರ ನಡುವೆ ವಂದೇ ಭಾರತ್ ರೈಲಿನ ನಿಯಮಿತ ಸೇವೆ ಯಾವಾಗ ಆರಂಭವಾಗಲಿದೆ ಎಂಬುದು ರೈಲ್ವೆ ಇಲಾಖೆಯ ಅಂತಿಮ ನಿರ್ಧಾರದ ಬಳಿಕ ಸ್ಪಷ್ಟವಾಗಲಿದೆ.