ಮಂಗಳೂರು, ಆ. 20 (DaijiworldNews/AK): ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆರೋಪಿಯಿಂದ ಕಳುವಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಅಜ್ಜಿಮಡ ನಿವಾಸಿ ರವಿಕುಮಾರ ಅಲಿಯಾಸ್ ರವಿ ಹೆಚ್.ಜಿ. ಬಂಧಿತ ಆರೋಪಿ.
ಆಗಸ್ಟ್ 18ರ ಮಧ್ಯರಾತ್ರಿ ಚಂದ್ರಮೌಳೇಶ್ವರ ದೇವಸ್ಥಾನದ ಮಾಡಿನ ಮೇಲಿದ್ದ ಜಾಲರಿಯ ಮೂಲಕ ಒಳಪ್ರವೇಶಿಸಿದ್ದ ಆರೋಪಿ, ಕೃತ್ಯ ಎಸಗುವ ಮುನ್ನ ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಬಳಿಕ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದನ್ನು ದೋಚಿದ್ದಾನೆ.
ತಕ್ಷಣ ದೇವಸ್ಥಾನದ ಆಡಳಿತ ಮಂಡಳಿಯು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿ ಸುಮಾರು ಕಳ್ಳತನ ಮಾಡಿದ 2195 ರೂ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ಮೇಲೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದೆ.