ಕಾಸರಗೋಡು, ಆ. 20 (DaijiworldNews/AK): ಶಾಲಾ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 25 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಬೋವಿಕ್ಕನ್ ಬಳಿಯ ಪೊವ್ವಲ್ ಮಾಸ್ತಿಕುಂಡು ನಲ್ಲಿ ಗುರುವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಕೇರಳ-ಕರ್ನಾಟಕ ಗಡಿಯಲ್ಲಿರುವ ಗಾಳಿಮುಖ ನಿವಾಸಿ ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ.
ಕೋಝಿಕ್ಕೋಡ್ನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಶಮ್ಮಾಸ್ ಗುರುವಾರ ಬೆಳಿಗ್ಗೆ 8.30 ರ ಸುಮಾರಿಗೆ ತಮ್ಮ ಬೈಕ್ನಲ್ಲಿ ತಮ್ಮ ಊರಿಗೆ ಹಿಂತಿರುಗುತ್ತಿದ್ದರು. ಮಾಸ್ತಿಕುಂಡು ತಲುಪಿದಾಗ, ಅವರ ಬೈಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಮ್ಮಾಸ್ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರು.
ಮೃತರು ಈ ಹಿಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಮೊಗ್ರಾಲ್ ನಿವಾಸಿ ಫಾತಿಮಾ ಅವರನ್ನು ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.