ಬಂಟ್ವಾಳ, ಆ. 20 (DaijiworldNews/TA): ತಾಲೂಕಿನ ಗ್ರಾಮೀಣ ಭಾಗದ ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ನಾಲ್ವರು ದರೋಡೆ ನಡೆಸಿರುವ ಘಟನೆ ಗುರುವಾರ ನಡೆದಿದೆ.


ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ವಿವಿಧ ಅಂಗಡಿಗಳಿಗೆ ಹೋಲ್ಸೇಲ್ನಲ್ಲಿ ಪೂರೈಸಿದ್ದ ಸಿಮೆಂಟ್ನ ಹಣವನ್ನು ವಸೂಲಿ ಮಾಡಿಕೊಂಡು ಬೈಕ್ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಎರಡು ಬೈಕ್ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ಬೈಕ್ ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಸವಾರನ ಬಳಿಯಿದ್ದ ಹಣದ ಬ್ಯಾಗ್ನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ದರೋಡೆಗೊಳಗಾದ ಬ್ಯಾಗ್ನಲ್ಲಿ ರೂ. 8 ಲಕ್ಷಕ್ಕೂ ಅಧಿಕ ಹಣ ಇತ್ತು ಎನ್ನಲಾಗಿದೆ. ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹಾಗೂ ಎಸ್ಐ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳು ಬಂದಿದ್ದ ಬೈಕ್ಗಳು, ಅವರ ಚಲನವಲನ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ. ಘಟನೆಯ ಸಂಪೂರ್ಣ ವಿವರ ಹಾಗೂ ದರೋಡೆಗೊಳಗಾದ ಹಣದ ನಿಖರ ಮೊತ್ತ ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟವಾಗಬೇಕಿದೆ.