ದಕ್ಷಿಣ ಕನ್ನಡ, ಆ. 17 (DaijiworldNews/TA): ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಶತಮಾನಗಳ ಇತಿಹಾಸ ಹಾಗೂ ವಿಶಿಷ್ಟ ಮಹತ್ವವಿದೆ. ತುಳುವರು ನಾಗನನ್ನು ಕಣ್ಣಿಗೆ ಕಾಣುವ ದೇವರೆಂದು ನಂಬಿಕೊಂಡಿದ್ದು, ಇದೇ ಕಾರಣಕ್ಕೆ ನಾಗರಪಂಚಮಿಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.

ನಾಗರಪಂಚಮಿಯಂದು ನಾಗನ ಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಗನ ವಿಗ್ರಹಕ್ಕೆ ಹಾಲು ಹಾಗೂ ಸೀಯಾಳಾಭಿಷೇಕ ಮಾಡುವ ಮೂಲಕ ನಾಗದೇವರ ಕೃಪೆಗೆ ಪಾತ್ರರಾಗುವುದು ಇಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಪ್ರಕೃತಿಯನ್ನೇ ದೇವರೆಂದು ಪೂಜಿಸುವ ತುಳುವರು, ಪ್ರಕೃತಿಯ ಬದಲಾವಣೆಗಳಿಗೆ ಅನುಗುಣವಾಗಿ ಹಲವು ವಿಶಿಷ್ಟ ಆಚರಣೆಗಳನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಸಂಪ್ರದಾಯಗಳಲ್ಲಿ ನಾಗರಪಂಚಮಿಗೂ ಪ್ರಮುಖ ಸ್ಥಾನವಿದೆ. ತುಳುನಾಡಿನ ಅನೇಕ ಕುಟುಂಬಗಳಿಗೆ ತಮ್ಮದೇ ಆದ ನಾಗನಕಟ್ಟೆ ಅಥವಾ ನಾಗಬನಗಳಿದ್ದು, ನಾಗರಪಂಚಮಿಯಂದು ಇಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಾಗನ ವಿಗ್ರಹಕ್ಕೆ ಹಾಲು ಹಾಗೂ ಸೀಯಾಳಾಭಿಷೇಕ ಮಾಡುವ ಮೂಲಕ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುವುದು ವಾಡಿಕೆಯಾಗಿದೆ.
ನಾಗಾರಾಧನೆಯ ಹಿಂದಿದೆ ಪೌರಾಣಿಕ ಹಿನ್ನೆಲೆ : ತುಳುನಾಡಿನಲ್ಲಿ ನಾಗಾರಾಧನೆಗೆ ಪೌರಾಣಿಕ ಹಿನ್ನೆಲೆಯೂ ಇದೆ. ಪರಶುರಾಮನು ಸಮುದ್ರಕ್ಕೆ ಕೊಡಲಿಯನ್ನು ಎಸೆದು ತುಳುನಾಡನ್ನು ಸೃಷ್ಟಿಸಿದ ಸಂದರ್ಭದಲ್ಲಿ, ಭೂಮಿಯಡಿಯಲ್ಲಿದ್ದ ಯಕ್ಷರು ತಮಗೆ ವಾಸಿಸಲು ಸ್ಥಳ ನೀಡುವಂತೆ ಪರಶುರಾಮನಲ್ಲಿ ಬೇಡಿಕೊಂಡರು ಎಂಬ ಪ್ರತೀತಿ ಇದೆ.
ಆ ಸಂದರ್ಭದಲ್ಲಿ ಯಕ್ಷರಿಗೆ ಇಲ್ಲಿ ವಾಸಿಸಲು ಅವಕಾಶ ನೀಡುವುದರ ಜೊತೆಗೆ ಅವರ ಆರಾಧನೆಯೂ ನಡೆಯಲಿದೆ ಎಂದು ಪರಶುರಾಮನು ಭರವಸೆ ನೀಡಿದನೆಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಯಕ್ಷ ಸ್ವರೂಪವೆಂದು ಪರಿಗಣಿಸಲಾಗುವ ನಾಗಗಳಿಗೆ ತುಳುನಾಡಿನ ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಸ್ಥಾನ ದೊರೆತಿದೆ ಎಂದು ಹೇಳಲಾಗುತ್ತದೆ.
ದೇವಸ್ಥಾನಗಳಲ್ಲೂ ನಾಗನಿಗೆ ಪ್ರತ್ಯೇಕ ಸ್ಥಾನ : ತುಳುನಾಡಿನ ಹಲವು ದೇವಸ್ಥಾನಗಳಲ್ಲಿ ಪ್ರಮುಖ ಆರಾಧ್ಯ ದೇವರ ಜೊತೆಗೆ ನಾಗದೇವರಿಗೂ ಪ್ರತ್ಯೇಕ ಕಟ್ಟೆಗಳನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರಸಿದ್ಧ ಕ್ಷೇತ್ರಗಳಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ.
ನಾಗರಪಂಚಮಿಯಂದು ಮನೆ, ನಾಗಬನ ಹಾಗೂ ನಾಗನಕಟ್ಟೆಗಳಲ್ಲಿ ನಡೆಯುವ ಪೂಜೆಗಳು ತುಳುವರ ಪ್ರಕೃತಿ ಆರಾಧನೆ ಮತ್ತು ನಾಗದೇವರ ಮೇಲಿನ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ. ಹೀಗಾಗಿ ತುಳುನಾಡಿನ ನಾಗರಪಂಚಮಿ ಕೇವಲ ಒಂದು ಹಬ್ಬವಲ್ಲ ನಾಗಾರಾಧನೆ, ಪ್ರಕೃತಿ ಪೂಜೆ ಹಾಗೂ ತಲೆತಲಾಂತರಗಳಿಂದ ಬಂದಿರುವ ತುಳುವರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ.