ಬಂಟ್ವಾಳ, ಆ. 17 (DaijiworldNews/AK):ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ 82 ವರ್ಷದ ಅವ್ವಮ್ಮ ಹೆಸರಿನ ವೃದ್ದೆಯ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದ ಪ್ರಕರಣವನ್ನು ಭೇಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅವ್ವಮ್ಮ (82)ರವರ ಮೊಮ್ಮಗನಾದ ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ (33) ಎಂದು ಗುರುತಿಸಲಾಗಿದೆ. ಪೊಲೀಸರು ಸುಮಾರು 5,00,000 ರೂ. ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ತಾಯಿ ಅವ್ವಮ್ಮ (82) ಎಂಬವರು ಅಗಸ್ಟ್ 14, 2026 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿಯೋರ್ವನು ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು ತಾಯಿಯ ಎರಡು ಕೈಯಲ್ಲಿದ್ದ ಸುಮಾರು 5,00,000 ರೂ ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದರು. ಈ ವೇಳೆ ತಾಯಿಗೆ ಕೈಗೆ ರಕ್ತಗಾಯವಾಗಿರುವ ಬಗ್ಗೆ ಸಾದಿಕ್ ಎಂಬವರು ದೂರು ನೀಡಿದ್ದರು.
ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 70/2026, ಕಲಂ: 309(6) BNS- 2023 ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಗಸ್ಟ್ ೧೬ ರಂದು ೨೦೨೬ ರಂದು ಆರೋಪಿ ಶಬೀರ್ನನ್ನು ಬಂಧಿಸಿ ಆತನಿಂದ ಎರಡು ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. , ಆಪಾದಿತನನ್ನು ವಿಚಾರಣೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿದ್ದಾರೆ.
ಈ ಪ್ರಕರಣದ ಪತ್ತೆಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ ರೋಹಿಸಣಿ ಸಿ.ಕೆ ರವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಎ ಎಸ್ ಐ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್, ಸತೀಶ್ ರವರು, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ರವರು ಕರ್ತವ್ಯ ನಿರ್ವಹಿಸಿದ್ದಾರೆ.