ಮಂಗಳೂರು, ಆ. 17 (DaijiworldNews/TA): ನಾಡಿನೆಲ್ಲೆಡೆ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಾಗರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಮಂಗಳೂರು ಹೊರವಲಯದ ಕುಡುಪುವಿನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭಕ್ತರು ತೆರಳಿ ನಾಗ ತಂಬಿಲ ಅರ್ಪಿಸಿದರು.


ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಸಾವಿರಾರು ಭಕ್ತರು ನಾಗ ದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು. ಕರಾವಳಿಯಲ್ಲಿ ನಾಗರ ಪಂಚಮಿಯಂದು ಎಲ್ಲರೂ ತಮ್ಮ ಪೂರ್ವಜರಿಂದ ಬಂದ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ತನು ಅರ್ಪಿಸುವ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಪವಿತ್ರ ದಿನದಂದು ಹಾಲು, ಸೀಯಾಳಗಳನ್ನು ನಾಗದೇವರಿಗೆ ಸಮರ್ಪಿಸುತ್ತಾರೆ. ಅಲ್ಲದೆ ಪ್ರತೀ ನಾಗಬನದಲ್ಲಿಯೂ ದೇವರಿಗೆ ತನು ಅರ್ಪಿಸಲು ಬರುವ ಭಕ್ತರು ತಂಬಿಲ ಸೇವೆಗಳನ್ನು ನಡೆಸುತ್ತಾರೆ.