ಮಂಗಳೂರು, ಆ. 17 (DaijiworldNews/TA): ಇಂದು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಿಸಲಾಗುತ್ತಿದ್ದು, ನಾಗರಾಧನೆ ನಡೆಯುವ ನಾಗಬನಗಳು ಪ್ಲಾಸ್ಟಿಕ್ ಕಸದಿಂದ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಮಂಗಳೂರಿನಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಯಿತು.

ಜೆಪ್ಪುವಿನ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ ‘ಪ್ಲಾಸ್ಟಿಕ್ ಮುಕ್ತ ನಾಗರಪಂಚಮಿ’ ಎಂಬ ಹೆಸರಿನಲ್ಲಿ ಕಳೆದ ಒಂದು ವಾರದಿಂದ ಅಭಿಯಾನ ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಮಂಗಳಾದೇವಿ, ಬೋಳಾರ ಹಾಗೂ ಹೊಯಿಗೆಬಜಾರ್ ವಾರ್ಡ್ಗಳ ವ್ಯಾಪ್ತಿಯಲ್ಲಿರುವ 60ಕ್ಕೂ ಹೆಚ್ಚು ನಾಗಬನಗಳಿಗೆ ಟ್ರಸ್ಟ್ನ ಸದಸ್ಯರು ಭೇಟಿ ನೀಡಿದರು.
ಈ ವೇಳೆ ನಾಗಬನಗಳ ಕುಟುಂಬದ ಮುಖಂಡರನ್ನು ಭೇಟಿಯಾಗಿ, ನಾಗರಪಂಚಮಿ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಮನವಿ ಮಾಡಿದರು. ಜಾಗೃತಿ ಮೂಡಿಸುವ ಉದ್ದೇಶದಿಂದ ಕರಪತ್ರಗಳು ಹಾಗೂ ಬಟ್ಟೆ ಚೀಲಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ನಾಗಬನಗಳ ಪಾವಿತ್ರ್ಯ ಕಾಪಾಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ನಾಗರಪಂಚಮಿ ಆಚರಣೆಯ ಸಂದರ್ಭದಲ್ಲಿ ಭಕ್ತರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.