ಬಂಟ್ವಾಳ, ಆ. 15 (DaijiworldNews/TA): ಬಾಲ್ಯದಿಂದಲೇ ಸೃಜನಾತ್ಮಕ ಚಿಂತನೆ ಮತ್ತು ಹೊಸತನ್ನು ರೂಪಿಸುವ ಆಸಕ್ತಿ ಬೆಳೆಸಿಕೊಂಡಿರುವ ಯುವಕನೊಬ್ಬ, ಈ ಬಾರಿಯ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿನೂತನ ಮಾದರಿಯೊಂದನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಂಟ್ವಾಳದ ಬುಡೋಳಿ ಮಡಲ ನಿವಾಸಿ ರಝಾಕ್ ಅವರ ಪುತ್ರ ಮೊಹಮ್ಮದ್ ಅಫೀಲ್ ಈ ಸೃಜನಶೀಲ ಪ್ರಯತ್ನ ನಡೆಸಿದ ಯುವಕ.

ಎಸ್ಎಸ್ಎಲ್ಸಿ ಬಳಿಕ ಆಟೋಮೊಬೈಲ್ ಕೋರ್ಸ್ ಪೂರ್ಣಗೊಳಿಸಿರುವ ಅಫೀಲ್ ಅವರಿಗೆ ಬಾಲ್ಯದಿಂದಲೇ ಹೊಸ ಹೊಸ ವಸ್ತುಗಳನ್ನು ಪ್ರಯೋಗಿಸುವ ಹಾಗೂ ವಿಭಿನ್ನ ಮಾದರಿಗಳನ್ನು ಸೃಷ್ಟಿಸುವ ಆಸಕ್ತಿ ಇತ್ತು. ಈ ಬಾರಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಮ್ಮ ಕಲ್ಪನೆಗೆ ತಾಂತ್ರಿಕ ರೂಪ ನೀಡಿರುವ ಅವರು, ಮೋಟಾರ್, ಬ್ಯಾಟರಿ, ರೆಗ್ಯುಲೇಟರ್, ಫೋಮ್, ಪ್ಲಗ್ ಹಾಗೂ ಪ್ಲ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಹೊಸ ಮಾದರಿಯನ್ನು ನಿರ್ಮಿಸಿದ್ದಾರೆ. ತಾಂತ್ರಿಕ ಜ್ಞಾನ ಹಾಗೂ ಸೃಜನಶೀಲತೆಯನ್ನು ಒಟ್ಟುಗೂಡಿಸಿ ರೂಪಿಸಿರುವ ಈ ಮಾದರಿ ಅವರ ಆಸಕ್ತಿ ಮತ್ತು ಪ್ರತಿಭೆಗೆ ಸಾಕ್ಷಿಯಾಗಿದೆ.
ಪ್ರಸ್ತುತ ಅಫೀಲ್ ಅವರು ಪುತ್ತೂರಿನ ಖಾಸಗಿ ಪ್ಲಾಸ್ಟಿಕ್ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ. ಉದ್ಯೋಗದ ನಡುವೆಯೂ ತಮ್ಮ ಸೃಜನಶೀಲ ಹವ್ಯಾಸವನ್ನು ಮುಂದುವರಿಸಿಕೊಂಡು, ಬಿಡುವಿನ ಸಮಯವನ್ನು ಹೊಸ ಪ್ರಯೋಗಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಯುವಜನತೆ ಕೇವಲ ತಂತ್ರಜ್ಞಾನ ಬಳಸುವುದಷ್ಟೇ ಅಲ್ಲದೆ, ಅದನ್ನು ತಮ್ಮ ಸೃಜನಶೀಲತೆಯೊಂದಿಗೆ ಬೆಸೆದು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕಿದೆ. ಅಫೀಲ್ ಅವರಂತಹ ಯುವ ಪ್ರತಿಭೆಗಳ ಕಲ್ಪನೆಗೆ ಸೂಕ್ತ ಪ್ರೋತ್ಸಾಹ ದೊರೆತರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿನೂತನ ತಂತ್ರಜ್ಞಾನ ಮಾದರಿಗಳು ಹಾಗೂ ಆವಿಷ್ಕಾರಗಳು ಮೂಡಿಬರಬಹುದು.