ಉಡುಪಿ, ಆ. 14 (DaijiworldNews/AA): ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಮೊದಲ ಬಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.

ಬಿಕಾಂ ಪದವೀಧರರಾಗಿರುವ ರಿಜ್ವಾನ್ ಅರ್ಷದ್(46) ಅವರು 2019ರಲ್ಲಿ ನಡೆದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1995-96ರಲ್ಲಿ ಎನ್ಎಸ್ಯುಐ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
2004ರಿಂದ 2010ರವರೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಹಾಗೂ ಬಳಿಕ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. 2011ರಲ್ಲಿ ರಾಜ್ಯ ಯುವ ಕಾಂಗ್ರೆಸ್ನ ಮೊದಲ ಬಾರಿಗೆ ಚುನಾಯಿತ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಿಜ್ವಾನ್ ಅರ್ಷದ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ. ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರು ಶುಕ್ರವಾರ ರಾತ್ರಿ ಉಡುಪಿಗೆ ಆಗಮಿಸಿದ್ದಾರೆ.
ಶನಿವಾರದ ಕಾರ್ಯಕ್ರಮಗಳ ವೇಳಾಪಟ್ಟಿ:
ಬೆಳಗ್ಗೆ 7:30ಕ್ಕೆ ನಗರ ಸರ್ವಿಸ್ ಬಸ್ ನಿಲ್ದಾಣದ ಬಳಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಆಯೋಜಿಸಿರುವ ಧ್ವಜಾರೋಹಣ ಕಾರ್ಯಕ್ರಮ.
ಬೆಳಗ್ಗೆ 8:00ಕ್ಕೆ ನಾಯರ್ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ.
ಬೆಳಗ್ಗೆ 8:30ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಬಳಿಯ ಹುತಾತ್ಮರ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ.
ಬೆಳಗ್ಗೆ 8:35ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಬಳಿಯಲ್ಲಿ ಬಾಸ್ಕೆಟ್ಬಾಲ್ ಕೋರ್ಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ.
ಬೆಳಗ್ಗೆ 8:45ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಮೇಲ್ಛಾವಣಿ ಕಾಮಗಾರಿಗೆ ಚಾಲನೆ.ಬೆಳಗ್ಗೆ 9:00ಕ್ಕೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ಮುಖ್ಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿ.
ಮಧ್ಯಾಹ್ನ 12:00ಕ್ಕೆ ಎಲ್ಐಸಿ ಲೀಕೊ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿರುವ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ.
ಮಧ್ಯಾಹ್ನ 12:15ಕ್ಕೆ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಫಾರ್ಮ್ನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿರುವ ಉಡುಪಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ 'ಇಲ್ಲು ಫುಡ್ಸ್' ಮಸಾಲೆ ಪುಡಿ ಘಟಕದ ಉದ್ಘಾಟನೆ.
ಮಧ್ಯಾಹ್ನ 12:30ಕ್ಕೆ ಬ್ರಹ್ಮಗಿರಿಯ ನಾಯರ್ಕೆರೆ ರಸ್ತೆಯ ಬಳಿ ಜಿಲ್ಲಾ ಪಂಚಾಯತ್ ಆಯೋಜಿಸಿರುವ 'ಅಕ್ಕ ಕೆಫೆ' ಉದ್ಘಾಟನೆ. ಬಳಿಕ ಅವರು ಮಂಗಳೂರಿಗೆ ತೆರಳಲಿದ್ದಾರೆ.