ಉಡುಪಿ, ಆ. 14 (DaijiworldNews/AA): ಅಕ್ರಮವಾಗಿ ಮಾದಕವಸ್ತುಗಳ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿರುವ ಆರೋಪದ ಮೇರೆಗೆ ಮಾದಕವಸ್ತುಗಳ ಅಕ್ರಮ ಸಾಗಾಟ ತಡೆ ಕಾಯ್ದೆ (PIT-NDPS) ಅಡಿಯಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ತಾಲೂಕು 76 ಬಡಗಬೆಟ್ಟು ವ್ಯಾಪ್ತಿಯ ಕೊಲಂಬೆ ಮಿಷನ್ ಕಾಂಪೌಂಡ್ ನಿವಾಸಿ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್ (34) ಬಂಧಿತ ಆರೋಪಿ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಲ್ಲಿಸಿದ ವರದಿಯ ಆಧಾರದ ಮೇಲೆ ಮಂಗಳೂರು ಪಶ್ಚಿಮ ವಲಯದ ಐಜಿಪಿ ಅವರು ಆ. 13ರಂದು ಬಂಧನ ಆದೇಶ ಹೊರಡಿಸಿದ್ದರು. ಆದೇಶದ ಬೆನ್ನಲ್ಲೇ ಅದೇ ದಿನ ಇಕ್ಬಾಲ್ನನ್ನು ಬಂಧಿಸಲಾಯಿತು.
ಪೊಲೀಸರ ಪ್ರಕಾರ, ಇಕ್ಬಾಲ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತುಗಳ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳು ಹಾಗೂ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಒಂದು ಪ್ರಕರಣ ದಾಖಲಾಗಿದೆ.
ಮಾದಕವಸ್ತುಗಳ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಐದು ಪ್ರಕರಣಗಳೂ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕವಸ್ತು ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಇಕ್ಬಾಲ್ ಈಗಾಗಲೇ ಅಪರಾಧಿ ಎಂದು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಇರಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.