ಕಾಸರಗೋಡು, ಆ. 14 (DaijiworldNews/TA): ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಅಗಲಿದ ಆತ್ಮಗಳ ಮೋಕ್ಷಕ್ಕಾಗಿ ಪಿತೃ ತರ್ಪಣ ಬಿಡುವುದು ಸಂಪ್ರದಾಯ. ನಾನಾ ಭಾಗಗಳ ಹಲವಾರು ದೇವಸ್ಥಾನಗಳಲ್ಲಿ ಪಿತೃ ತರ್ಪಣಕ್ಕೆ ಸಿದ್ಧತೆ ಮಾಡುವುದು ರೂಡಿ. ಅದರಂತೆ ಕೇರಳ ರಾಜ್ಯದಾದ್ಯಂತ ವಿವಿಧ ದೇವಸ್ಥಾನ ಹಾಗೂ ಸಮುದ್ರ ತೀರಗಳಲ್ಲಿ ಅಗಲಿದ ಆತ್ಮಗಳ ಮೋಕ್ಷಕ್ಕಾಗಿ ಪಿತೃ ತರ್ಪಣ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಅತ್ಯಂತ ಪ್ರಮುಖವಾದದ್ದು ಇತಿಹಾಸ ಪ್ರಸಿದ್ಧ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಸಮುದ್ರ ಕಿನಾರೆ. ದಕ್ಷಿಣದ ಕಾಶಿ ಎಂದೇ ಗುರುತಿಸಿಕೊಂಡಿರುವ ಈ ಕ್ಷೇತ್ರದಲ್ಲಿ, ಆಟಿ ಅಮಾವಾಸ್ಯೆಯ ದಿನ ನಸುಕಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಾರೆ.

ಅರಬ್ಬಿ ಸಮುದ್ರದ ಅಲೆಗಳ ನಿನಾದದ ನಡುವೆ ಸಾವಿರಾರು ಭಕ್ತಾದಿಗಳು ತಮ್ಮ ಪೂರ್ವಜರನ್ನು ಸ್ಮರಿಸಿ, ಪುಣ್ಯೋದಕದೊಂದಿಗೆ ತರ್ಪಣ ಅರ್ಪಿಸಿ ಧನ್ಯತೆ ಪಡೆಯುವ ಈ ಜಾಗಕ್ಕೆ ಕೇರಳ, ಕರ್ನಾಟಕ ಹಾಗು ತಮಿಳುನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಪಿತೃ ತರ್ಪಣ ಕಾರ್ಯಕ್ರಮ ಸುಲಲಿತವಾಗಿ ನಡೆಯಲು ದೇವಸ್ಥಾನದ ವತಿಯಿಂದ ಸಾಕಷ್ಟು ಕೌಂಟರ್ಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಹಲವು ಮಂದಿ ಪ್ರಖ್ಯಾತ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಡುತ್ತಾರೆ. ಈ ಬಾರಿಯೂ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಜನ ಸೇರಿದ್ದು ಸುಲಲಿತವಾಗಿ ಕಾರ್ಯಗಳು ನಡೆದಿವೆ.
ಇನ್ನು ಭಕ್ತರ ಸಂಖ್ಯೆ ಅಪಾರವಾಗಿದ್ದರಿಂದ ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದರಿಂದ, ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕೋಸ್ಟ್ ಗಾರ್ಡ್ ನೇತೃತ್ವದಲ್ಲಿ ಕೋಸ್ಟಲ್ ಪೊಲೀಸರು, ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಪೊಲೀಸರು ಭದ್ರತೆ ಒದಗಿಸಿದ್ದರು. ಸಮುದ್ರ ಸ್ನಾನ ಮಾಡುವವರ ಮೇಲೆ ಕಟ್ಟೆಚ್ಚರ ವಹಿಸಲಾಗಿ, ಅಗ್ನಿಶಾಮಕ ದಳವನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಒಟ್ಟಿನಲ್ಲಿ ಕಡಲಬ್ಬರದ ನಡುವೆಯೂ ಸೂಕ್ತ ಪೊಲೀಸ್ ಭದ್ರತೆ ಮತ್ತು ಅಗತ್ಯ ಸೌಲಭ್ಯಗಳೊಂದಿಗೆ ತೃಕ್ಕನ್ನಾಡ್ನಲ್ಲಿ ಆಟಿ ಅಮಾವಾಸ್ಯೆ ಪಿತೃ ತರ್ಪಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇತಿಹಾಸ ಪ್ರಸಿದ್ಧ ಬೇಕಲದ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನದ ಸಮುದ್ರ ಕಿನಾರೆ ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.