ಉಡುಪಿ, ಆ. 12 (DaijiworldNews/AA): ಪ್ರಿನ್ಸ್ ಎಂಟರ್ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದ ಹಣದ ವರ್ಗಾವಣೆಗೆ ನೆರವು ನೀಡುವ ಮೂಲಕ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಕಾಪು ತಾಲೂಕಿನ ತೆಂಕ ಗ್ರಾಮದ ನಿವಾಸಿ ಚಿರಾಗ್ ಪೂಜಾರಿ (26) ಹಾಗೂ ಕಾಪು ತಾಲೂಕಿನ ಎರ್ಮಾಳ್ ತೆಂಕ ನಿವಾಸಿ ಮೊಹಮ್ಮದ್ ಇರ್ಷಾದ್ (43) ಎಂದು ಗುರುತಿಸಲಾಗಿದೆ.
ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಆರೋಪಿಗಳು ಬೈಕ್ನಲ್ಲಿ ಸ್ಥಳಕ್ಕೆ ಬಂದಿದ್ದು, ಹಿಂಬದಿ ಕುಳಿತಿದ್ದ ವ್ಯಕ್ತಿ ಪಿಸ್ತೂಲ್ನಿಂದ ಡೇವಿಡ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಈಗಾಗಲೇ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರನ್ನು ಪೊಲೀಸರು ಬಂಧಿಸಿದ್ದರು.
ತನಿಖೆ ಮುಂದುವರೆಸಿದ ಪೊಲೀಸರು, ಹತ್ಯೆಗೆ ಸಂಬಂಧಿಸಿದ ಹಣದ ವರ್ಗಾವಣೆಯನ್ನು ನಡೆಸಿಕೊಡುವ ಮೂಲಕ ಮತ್ತಿಬ್ಬರು ಆರೋಪಿಗಳಿಗೆ ನೆರವು ನೀಡಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಬಳಿಕ ನೆರವು ನೀಡಿದ ಮತ್ತಿಬ್ಬರನ್ನು ಆಗಸ್ಟ್ 12ರಂದು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.