ಮಂಗಳೂರು, ಆ. 12 (DaijiworldNews/TA): ತುಳುನಾಡಿನ ಸಾಂಪ್ರದಾಯಿಕ ಆಚರಣೆ ಹಾಗೂ ಆರೋಗ್ಯ ಪರಂಪರೆಯ ಪ್ರತೀಕವಾಗಿರುವ ಆಟಿ ಅಮಾವಾಸ್ಯೆಯ ಹಾಳೆ ಕೆತ್ತೆ ಕಷಾಯ ಹಾಗು ಮೆಂತೆ ಗಂಜಿ ಹಂಚುವ ಕಾರ್ಯಕ್ರಮ ನಗರದ ಡಿಂಕಿ ಡೈನ್ ಹೋಟೆಲ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.




ಡಿಂಕಿ ಡೈನ್ ಹೋಟೆಲ್ ಹಾಗೂ ತುಳುವ ಬೊಳ್ಳಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸುಮಾರು 2,500ಕ್ಕೂ ಅಧಿಕ ಮಂದಿ ಧರ್ಮಾರ್ಥವಾಗಿ ಪಾಲೆ ಮರದ ಕಷಾಯ ಹಾಗೂ ಆಟಿ ಗಂಜಿ ಸೇವಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸಂಸ್ಥಾಪಕ ಅದ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಜೋಗಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷ ಕಿರಣ್ ಜೋಗಿ, ಮಾಜಿ ಕಾರ್ಪೊರೇಟರ್ ಕಿರಣ್ ಕೋಡಿಕಲ್, ನಟ-ನಿರ್ಮಾಪಕ ವಿಜಯ್ ಕುಮಾರ್ ಕೊಡ್ಯಾಲ್ಬೈಲ್, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಸನಾತನ ನಾಟ್ಯಾಲಯದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹಾಗೂ ಯೋಗ ಗುರು ಜಗದೀಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ತುಳುವ ಬೊಳ್ಳಿ ಪ್ರತಿಷ್ಠಾನದ ದಯಾನಂದ ಕತ್ತಲ್ ಸಾರ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಡಿಂಕಿ ಡೈನ್ನ ಅಧ್ಯಕ್ಷ ಸ್ವರ್ಣ ಸುಂದರ್ ಅವರು ಉಪಸ್ಥಿತರಿದ್ದ ಗಣ್ಯರು ಹಾಗೂ ಸಾರ್ವಜನಿಕರಿಗೆ ಸ್ವಾಗತ ಕೋರಿದರು. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಪಾಲೆ ಮರದ ಕಷಾಯ ಹಾಗೂ ಮೆಂತೆ ಗಂಜಿ ವಿತರಿಸುವ ಮೂಲಕ ಆಟಿ ಅಮಾವಾಸ್ಯೆಯ ಸಾಂಪ್ರದಾಯಿಕ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.