ಬಂಟ್ವಾಳ, ಆ. 11 (DaijiworldNews/AK): ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಬಳಿಯ ಕುಂಟುಕುಡೇಲು ಎಂಬಲ್ಲಿ ಮಂಗಳವಾರ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಖಾಸಗಿ ಶಾಲೆಗೆ ಸೇರಿದ ಬಸ್, ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ವಾಹನವು ಕುಂಟುಕುಡೇಲು ತಲುಪುತ್ತಿದ್ದಂತೆ, ಇಳಿಜಾರಿನ ರಸ್ತೆಯಲ್ಲಿ ದಿಡೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಹೊರಬಂದು ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿದ್ದು, ವಿದ್ಯುತ್ ಕಂಬ ಮುರಿದು ಬಸ್ ಮೇಲೆ ಉರುಳಿದೆ. ಘಟನೆಯಲ್ಲಿ ಅದೇಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ.
ಘಟನೆ ನಡೆದ ಕೂಡಲೇ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಬಸ್ಸಿನಿಂದ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ.
ಅದೃಷ್ಟವಶಾತ್, ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ನೇರವಾಗಿ ವಾಹನದ ಮೇಲೆ ಬಿದ್ದಿದ್ದರೂ, ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ, ಇದರಿಂದಾಗಿ ಆಗಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.