ವಿಟ್ಲ, ಆ. 11 (DaijiworldNews/AA): ವಿಟ್ಲ-ಕನ್ಯಾನ ರಸ್ತೆ ಸಂಪೂರ್ಣವಾಗಿ ಹೊಂಡಮಯವಾಗಿದ್ದು, ವಾಹನ ಸವಾರರು ಪ್ರತಿನಿತ್ಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ರಸ್ತೆಯ ದುಸ್ಥಿತಿಯಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು, ಅಧಿಕಾರಿಗಳನ್ನು ಅಣಕಿಸುವ ವ್ಯಂಗ್ಯಚಿತ್ರಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.









ಈ ರಸ್ತೆ ವಿಟ್ಲದಿಂದ ಬೈರಿಕಟ್ಟೆ, ಕನ್ಯಾನ, ಕಾಸರಗೋಡು ಜಿಲ್ಲೆಯ ಉಪ್ಪಳ, ಮಂಜೇಶ್ವರವನ್ನು ಸಂಪರ್ಕಿಸುವ ಪ್ರಮುಖ ಅಂತರ್ರಾಜ್ಯ ಮಾರ್ಗವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಕಾನತ್ತಡ್ಕದಿಂದ ಕನ್ಯಾನದವರೆಗೆ ಈ ರಸ್ತೆಯಲ್ಲಿ ಹಲವು ತಿರುವುಗಳಿವೆ. ರಸ್ತೆಯ ಒಂದು ಬದಿ ರಕ್ಷಿತಾರಣ್ಯವಿದ್ದರೆ, ಇನ್ನೊಂದೆಡೆ ಪ್ರಪಾತವಿದೆ. ಕಿರಿದಾದ ರಸ್ತೆಯಲ್ಲಿ ಎರಡು ವಾಹನಗಳು ಎದುರು-ಬಹುರಾದಾಗ ಅವುಗಳನ್ನು ದಾಟಿಸಲು ವಾಹನ ಚಾಲಕರು ಹರಸಾಹಸ ಪಡಬೇಕಾಗುತ್ತದೆ. ಇದೀಗ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ವಾಹನ ಸವಾರರಿಗೆ ಸವಾಲಾಗಿದೆ.
ಕಳೆದ ವರ್ಷವೂ ಈ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದರಿಂದ, ಸಾರ್ವಜನಿಕರು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲೇ 'ಶವ ಸಂಸ್ಕಾರ' ಎಂಬ ಫಲಕ ಅಳವಡಿಸಿದ್ದರು. ಈ ಘಟನೆ ಭಾರಿ ಸುದ್ದಿಯಾಗಿತ್ತು. ಬಳಿಕ ರಸ್ತೆಯಲ್ಲಿದ್ದ ಹೊಂಡಗಳನ್ನು ದುರಸ್ತಿಪಡಿಸಲಾಗಿತ್ತು.
ಆದರೆ, ಇದೀಗ ಮುಂಗಾರು ಆರಂಭವಾಗುತ್ತಿದ್ದಂತೆ ರಸ್ತೆ ಸಂಪೂರ್ಣವಾಗಿ ಹೊಂಡ ಮಯವಾಗಿದೆ. ಹೀಗಾಗಿ ತಕ್ಷಣವೇ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕನ್ಯಾನ-ಕರೋಪಾಡಿ ಗ್ರಾಮದಿಂದ ಪ್ರತಿನಿತ್ಯ ನೂರಾರು ಬಾಕ್ಸೆಟ್ ಮಣ್ಣು ಸಾಗಾಟ ಲಾರಿಗಳು ಸಂಚರಿಸುತ್ತವೆ. ಇದೂ ರಸ್ತೆ ಸಂಪೂರ್ಣವಾಗಿ ಹದಗೆಡಲು ಪೆಮುಖ ಕಾರಣಗಳಲ್ಲಿ ಒಂದಾಗಿದೆ. ರಸ್ತೆಯ ಧಾರಣೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಹೊತ್ತ ವಾಹನಗಳು ಸಂಚರಿಸುತ್ತಿರುವುದರಿಂದ ಇಲ್ಲಿಯ ರಸ್ತೆಯ ಬದಿಗಳು ಕುಸಿಯುತ್ತಿವೆ.
ಸಂಬಂಧಪಟ್ಟ ಇಲಾಖೆ ತಕ್ಷಣವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.