ಮಂಗಳೂರು, ಆ. 10 (DaijiworldNews/TA): ಕರಾವಳಿಯ ಸಾಂಸ್ಕೃತಿಕ ನಗರಿ ಮಂಗಳೂರಿನ ಐತಿಹಾಸಿಕ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ನಲ್ಲಿ ಭವ್ಯವಾದ 78 ಮೀಟರ್ ಎತ್ತರದ ನೂತನ ಧ್ವಜಸ್ತಂಭ ತಲೆಎತ್ತಿದೆ. ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಬೃಹತ್ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಅಧಿಕೃತವಾಗಿ ಹಾರಿಸಲು ಸಿದ್ಧತೆ ನಡೆಸಲಾಗಿದೆ.

ಮಂಗಳೂರಿನ ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣವಾಗಿರುವ ಬಾವುಟಗುಡ್ಡೆಗೆ ಈ ಬೃಹತ್ ಧ್ವಜಸ್ತಂಭ ಮತ್ತೊಂದು ವಿಶೇಷ ಮೆರುಗು ನೀಡಿದೆ. ನಗರದ ಎತ್ತರದ ಪ್ರದೇಶದಲ್ಲಿರುವುದರಿಂದ ಇಲ್ಲಿ ಹಾರಾಡುವ ರಾಷ್ಟ್ರಧ್ವಜವು ನಗರದ ಹಲವು ಭಾಗಗಳಿಂದಲೂ ಗೋಚರಿಸುವ ನಿರೀಕ್ಷೆಯಿದೆ.
ರೂ. 75 ಲಕ್ಷ ವೆಚ್ಚದಲ್ಲಿ ನಿರ್ಮಾಣ : ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ರೂ. 75 ಲಕ್ಷ ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನು ಪಾಲಿಕೆಯಲ್ಲಿ ಠೇವಣಿಯಿಟ್ಟು, ಅದೇ ಮೊತ್ತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ರಾಯಪುರದಿಂದ ತರಿಸಲಾದ ಬೃಹತ್ ಲೋಹದ ಕಂಬದ ವಿವಿಧ ಭಾಗಗಳನ್ನು ದೈತ್ಯ ಕ್ರೇನ್ಗಳ ನೆರವಿನಿಂದ ಒಂದಕ್ಕೊಂದು ಜೋಡಿಸಿ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ.
14 ಟನ್ ತೂಕದ ಬೃಹತ್ ಕಂಬ : ಈ ಧ್ವಜಸ್ತಂಭವು ಜಿಐ ಲೋಹದಿಂದ ನಿರ್ಮಾಣಗೊಂಡಿದ್ದು, ಇದರ ಒಟ್ಟು ತೂಕ ಸುಮಾರು 14 ಟನ್ ಎನ್ನಲಾಗಿದೆ. ಧ್ವಜಸ್ತಂಭ ಅಳವಡಿಸುವ ಜವಾಬ್ದಾರಿಯನ್ನು ‘ಸನ್ಲೈಟ್ ಲ್ಯುಮಿನರೀಸ್’ ಸಂಸ್ಥೆ ನಿರ್ವಹಿಸಿದೆ.
ಧ್ವಜಾರೋಹಣಕ್ಕಾಗಿ ಮೋಟರೀಕೃತ ವ್ಯವಸ್ಥೆ ಅಳವಡಿಸಲಾಗಿದ್ದು, ತ್ರೀ-ಫೇಸ್ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಧ್ವಜಸ್ತಂಭದ ಮೇಲ್ಭಾಗದಲ್ಲಿ ಮಿಂಚುಬಂಧಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಇದಲ್ಲದೆ, ವಿಮಾನಗಳಿಗೆ ಧ್ವಜಸ್ತಂಭ ಗೋಚರಿಸುವಂತೆ ಎರಡೂ ಬದಿಗಳಲ್ಲಿ ಕೆಂಪು ಬಣ್ಣದ ಮಾರ್ಗಸೂಚಿ ದೀಪಗಳನ್ನು ಅಳವಡಿಸಲಾಗಿದೆ.
ಬಿರುಸಿನ ಗಾಳಿಗೂ ತಡೆದುಕೊಳ್ಳುವ ವಿಶೇಷ ಧ್ವಜ : ಮಂಗಳೂರಿನ ಕರಾವಳಿ ಪ್ರದೇಶದಲ್ಲಿ ಬೀಸುವ ಬಿರುಸಿನ ಗಾಳಿಯನ್ನು ಗಮನದಲ್ಲಿಟ್ಟುಕೊಂಡು 30x45 ಅಡಿ ಗಾತ್ರದ ವಿಶೇಷ ಪಾಲಿಸ್ಟರ್ ರಾಷ್ಟ್ರಧ್ವಜವನ್ನು ಸಿದ್ಧಪಡಿಸಲಾಗಿದೆ. ಬೃಹತ್ ಗಾತ್ರದ ಈ ಧ್ವಜವು ಧ್ವಜಸ್ತಂಭದ ಪ್ರಮುಖ ಆಕರ್ಷಣೆಯಾಗಲಿದೆ.
ಸ್ವಾತಂತ್ರ್ಯ ಹೋರಾಟದ ನೆನಪು ಹೊತ್ತ ಬಾವುಟಗುಡ್ಡೆ : ಬಾವುಟಗುಡ್ಡೆಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವೂ ಇದೆ. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಂಗಳೂರಿನ ಇದೇ ಪ್ರದೇಶದಲ್ಲಿ ಧ್ವಜಾರೋಹಣ ನಡೆದಿತ್ತು ಎನ್ನಲಾಗುತ್ತದೆ. ಈ ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವಂತೆ ಇದೀಗ 78 ಮೀಟರ್ ಎತ್ತರದ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗಿದೆ. ಆಗಸ್ಟ್ 15ರಂದು ಇಲ್ಲಿ ರಾಷ್ಟ್ರಧ್ವಜ ಹಾರಾಡುವ ಮೂಲಕ ಐತಿಹಾಸಿಕ ಬಾವುಟಗುಡ್ಡೆಗೆ ಮತ್ತೊಂದು ಗರಿ ಮೂಡಲಿದೆ. ನಗರದ ಎತ್ತರದ ಪ್ರದೇಶದಲ್ಲಿರುವ ಈ ಧ್ವಜಸ್ತಂಭದಿಂದ ಹಾರುವ ತ್ರಿವರ್ಣ ಧ್ವಜವು ಮಂಗಳೂರಿನ ನಾಲ್ಕೂ ದಿಕ್ಕುಗಳಿಂದಲೂ ಗಮನ ಸೆಳೆಯುವ ನಿರೀಕ್ಷೆಯಿದೆ.