ವಿಟ್ಲ, ಆ. 09 (DaijiworldNews/TA): ವಿಟ್ಲ-ಕನ್ಯಾನ ರಸ್ತೆ ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ಕೂಡಿ ವಾಹನ ಚಾಲಕರು ಯಾತನೇ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ರೊಚ್ಚಿಗೆದ್ದು ಕಾರ್ಟೂನ್ ಚಿತ್ರ ಅಳವಡಿಸುವುದರ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.



ವಿಟ್ಲದಿಂದ ಈ ರಸ್ತೆ ಬೈರಿಕಟ್ಟೆ, ಕನ್ಯಾನ ಕೇರಳದ ಉಪ್ಪಳ, ಮಂಜೇಶ್ವರ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಆಗಿದೆ. ಪ್ರತಿನಿತ್ಯ ಸಾವಿರಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತಿದೆ. ಕಾನತ್ತಡ್ಕದಿಂದ ಕನ್ಯಾನ ವರೆಗೆ ಈ ರಸ್ತೆ ತಿರುವು ಹೊಂದಿದೆ. ಒಂದು ಬದಿ ರಕ್ಷಿತಾರಣ್ಯ ಹೊಂದಿದ್ದು, ಇನ್ನೊಂದು ಬದಿ ಪ್ರಪಾತ ಇದೆ. ಪರಸ್ಪರ ಎರಡು ವಾಹನಗಳು ಮುಖಾಮುಖಿಯಾದಾಗ ಸಂಚಾರ ಮಾಡಲು ಹರಸಾಹಸ ಪಡಬೇಕು. ಕಳೆದ ವರ್ಷ ಇಲ್ಲಿಯ ಇದೇ ರೀತಿ ಹೊಂಡ ನಿರ್ಮಾಣ ಆಗಿದ್ದರಿಂದ ಸಾರ್ವಜನಿಕರು ಅಧಿಕಾರಿಗಳ ಶವ ಸಂಸ್ಕಾರ ಎಂಬ ನಾಮಫಲಕ ಅಳವಡಿಸಿ ಭಾರೀ ಸುದ್ದಿಯಾಗಿತ್ತು.
ಬಳಿಕ ಹೊಂಡಗಳಿಗೆ ತೇಪೆ ಹಾಕವ ಕಾರ್ಯ ನಡೆಸಲಾಗಿತ್ತು. ಇದೀಗ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದೆ. ತಕ್ಷಣವೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಕೂಗು ಕೇಳಿ ಬಂದಿದೆ.